ಬಾಲಿವುಡ್ ನಟ ರಣ್ಬೀರ್ ಕಪೂರ್ ಹಾಗೂ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಅನಿಮಲ್'. ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ಪ್ರಚಾರ ಕಾರ್ಯಾರಂಭಿಸಿದೆ. ಈ ನಿಟ್ಟಿನಲ್ಲಿ ಇಂದು ಹುವಾ ಮೈನ್ ಹಾಡು ಬಿಡುಗಡೆ ಆಗಿದೆ.
ಚಿತ್ರದ ಮೊದಲ ರೊಮ್ಯಾಂಟಿಂಕ್ ಸಾಂಗ್: ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿರುವ ಈ ಸಿನಿಮಾ ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರ 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಮೊದಲ ರೊಮ್ಯಾಂಟಿಂಕ್ ಸಾಂಗ್ ಇದೀಗ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ.
ರಣ್ಬೀರ್- ರಶ್ಮಿಕಾ ಕೆಮಿಸ್ಟ್ರಿ ಹೇಗಿದೆ?: ಹುವಾ ಮೈನ್ ಸಾಂಗ್ನಲ್ಲಿ ಜೋಡಿಯ ಕೆಮಿಸ್ಟ್ರಿ ಸಖತ್ತಾಗೇ ವರ್ಕ್ ಔಟ್ ಆಗಿದೆ. ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ ಅಂತಿದಾರೆ ಫ್ಯಾನ್ಸ್. ಈ ಹಾಡು ರಣ್ಬೀರ್-ರಶ್ಮಿಕಾ ಜೋಡಿಯ ಮದುವೆಯ ಪ್ರಯಾಣವನ್ನು ಚಿತ್ರಿಸಿದೆ. ಹಾಡಿನಲ್ಲಿ ರಣ್ಬೀರ್ ರಶ್ಮಿಕಾಗೆ ವಿಮಾನ ಹಾರಿಸುವ ತರಬೇತಿ ಕೊಡೋದ್ರಿಂದ ಹಿಡಿದು ಕುಟುಂಬಸ್ಥರ ಎದುರೇ ಲಿಪ್ ಲಾಕ್ ಮಾಡುವ ದೃಶ್ಯಗಳೂ ಇವೆ. ಪ್ರತಿ ಸೀನ್ಗಳು ಜೋಡಿಯ ಕನೆಕ್ಷನ್ ಅಥವಾ ಕೆಮಿಸ್ಟ್ರಿಗೆ ಸಾಕ್ಷಿಯಾಗಿದೆ. ಹಾಡಿನ ಹೆಚ್ಚಿನ ದೃಶ್ಯಗಳಲ್ಲಿ ಇಬ್ಬರೂ ಪರಸ್ಪರ ನಯವಾಗಿ ಚುಂಬಿಸುವುದನ್ನು ಕಾಣಬಹುದು. ದೃಶ್ಯಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ರಣ್ಬೀರ್-ರಶ್ಮಿಕಾ ಮೇಲೆ ಪ್ರೀತಿಯ ಧಾರೆಯೆರೆದಿದ್ದಾರೆ.
ಹಿಮಭರಿತ ದೃಶ್ಯಗಳ ಹಿನ್ನೆಲೆಯಲ್ಲಿ, ಭಗವಾನ್ ಶಿವನ ಪ್ರತಿಮೆಯ ಮುಂದೆ ಲವ್ ಬರ್ಡ್ಸ್ ಮದುವೆಯಾಗುತ್ತಾರೆ. ರಣ್ಬೀರ್ ಕಪೂರ್ ಕ್ಲೀನ್ ಶೇವ್ ಲುಕ್ನಲ್ಲಿ ಕಾಣಿಸಿಕೊಂಡು ಯುವತಿಯರ ಹೃದಯ ಕದ್ದಿದ್ದಾರೆ. ಇತ್ತ ರಶ್ಮಿಕಾ ಮಂದಣ್ಣ ಮೊಗದ ಮೇಲೆ ನವವಿವಾಹಿತೆಯ ಕಳೆ ಎದ್ದು ಕಾಣುತ್ತಿದೆ. ಮನೋಜ್ ಮುಂತಶಿರ್ ಸಾಹಿತ್ಯ ಬರೆದಿದ್ದು, ರಾಘವ್ ಚೈತನ್ಯ ಮತ್ತು ಪ್ರೀತಮ್ ಹಾಡಿಗೆ ದನಿಯಾಗಿದ್ದಾರೆ.