ಬ್ಲಾಕ್ಬಸ್ಟರ್ ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'. ಬಹುಬೇಡಿಕೆ ತಾರೆಯರಾದ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರ ನಿರ್ವಹಿಸಿರುವ ವೈಮಾನಿಕ ಆ್ಯಕ್ಷನ್ ಸಿನಿಮಾ ಸಿನಿಪ್ರಿಯರ ಗಮನ ಸೆಳೆದಿದೆ. ಸಿನಿಮಾ ಬಿಡುಗಡೆಗೆ ಎರಡು ತಿಂಗಳಿದ್ದು, ಪ್ರಚಾರ ಪ್ರಾರಂಭವಾಗಿದೆ. ಪೋಸ್ಟರ್ ಹಂಚಿಕೊಂಡು ನಾಯಕ ನಟ ಹೃತಿಕ್ ರೋಷನ್ ಗಮನ ಸೆಳೆದಿದ್ದಾರೆ. ಸುಧೀರ್ಘ ಪ್ರಚಾರದ ತಂತ್ರ ರೂಪಿಸಿರುವ ತಂಡ, ಡಿಸೆಂಬರ್ನಲ್ಲಿ ಟೀಸರ್ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ.
ಫೈಟರ್ ಪೋಸ್ಟರ್ ಅನಾವರಣ:ಇಂದು ನಟ ಹೃತಿಕ್ ರೋಷನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಫೈಟರ್‌ನ ಪೋಸ್ಟರ್ ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಎರಡು ತಿಂಗಳಿರುವುದನ್ನು ಪೋಸ್ಟರ್ ಸೂಚಿಸಿದೆ. ಪೋಸ್ಟರ್‌ನಲ್ಲಿ, ಯುದ್ಧ ವಿಮಾನಗಳು ನಿಂತಿವೆ. ಮೇಲೆ 'ಎರಡು ತಿಂಗಳು' ಎಂದು ಬರೆಯಲಾಗಿದೆ. ಜೊತೆಗೆ "ಹಾರಲು ಹುಟ್ಟಿದ್ದೇನೆ. ರಕ್ಷಿಸುವುದಾಗಿ ಪ್ರಮಾಣ ಮಾಡಿದ್ದೇನೆ" ("Born to fly. Sworn to protect") ಎಂಬ ಬರಹ ಸಿನಿಪ್ರಿಯರ ಗಮನ ಸೆಳೆದಿದೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ನಟ ಅನಿಲ್ ಕಪೂರ್ ಕೂಡ ಇದೇ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 4 ರಂದು ನಿರ್ದೇಶಕ ಸಿದ್ಧಾರ್ಥ್ ಆನಂದ್ ತಮ್ಮ ಫೈಟರ್ ಸಿನಿಮಾದ ಇಟಲಿ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಂಡಿರುವುದಾಗಿ ಸೋಷಿಯಲ್ ಮಿಡಿಯಾ ಪ್ಲಾಟ್ಪಾರ್ಮ್ ಎಕ್ಸ್ನಲ್ಲಿ ತಿಳಿಸಿದ್ದರು. ನಂತರ ವಾಯುಪಡೆ ಅಧಿಕಾರಿ ಪಾತ್ರಗಳನ್ನು ನಿರ್ವಹಿಸುತ್ತಿರುವವರನ್ನು ಒಳಗೊಂಡ ತೆರೆಮರೆಯ ಫೋಟೋವನ್ನೂ ಹಂಚಿಕೊಂಡಿದ್ದರು.