ಕನ್ನಡ ಚಿತ್ರರಂಗದಲ್ಲಿ ಗೀತೆ ರಚನೆಕಾರರು ನಿರ್ದೇಶಕರಾಗೋದು ಹೊಸತೇನಲ್ಲ. ಈಗಾಗಲೇ ಸಾಕಷ್ಟು ಸಾಹಿತಿಗಳು ಡೈರೆಕ್ಟರ್ ಆಗಿ ಯಶಸ್ಸು ಸಹ ಕಂಡಿದ್ದಾರೆ. ಇದೀಗ ಮುಂಗಾರು ಮಳೆ, ಗಾಳಿಪಟ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಹಾಡು ಬರೆದಿರುವ ಸಾಹಿತಿ ಹೃದಯಶಿವ ಬಿಸಿಲು ಕುದುರೆ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಸಂಪತ್ ಮೈತ್ರೇಯ ಹಾಗೂ ಸುನೀತಾ ಅಭಿನಯಿಸಿರೋ ಬಿಸಿಲು ಕುದುರೆ ಸಿನಿಮಾಗೆ, ಹೃದಯಶಿವ ನಿರ್ದೇಶನ ಮಾಡಿದ್ದು, ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಇತ್ತೀಚೆಗೆ ಈ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.
ಮೊದಲು ಮಾತನಾಡಿದ ನಿರ್ದೇಶಕ ಹೃದಯಶಿವ ಅವರು, ಕನ್ನಡ ಚಿತ್ರರಂಗದೊಂದಿಗೆ ನನಗೆ ಎರಡು ದಶಕಗಳ ನಂಟು. ಕನ್ನಡದ ಹಲವು ಚಿತ್ರಗಳಿಗೆ ಹಾಡು ಬರೆದಿದ್ದೇನೆ. ಕನ್ನಡದಲ್ಲಿ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಅರುಣ್ಯದಂಚಿನಲ್ಲಿ ತುಂಡು ಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಚಿತ್ರವಿದು. ಒಂದೇ ಸರ್ಕಾರದಡಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೇ ಹೋದಾಗ ಕಾಡಂಚಿನ ರೈತರ ಪಾಡು ಏನಾಗುತ್ತದೆ ಎಂಬುದೇ ಕಥಾಹಂದರ ಎಂದು ತಿಳಿಸಿದರು.
ಇಮ್ತಿಯಾಜ್ ಸುಲ್ತಾನ್ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಹಾಗೂ ಮೂರು ಬೀಟ್ಸ್ಗಳು ಸುಮಧುರವಾಗಿ ಮೂಡಿ ಬಂದಿವೆ. ಅನೂಪ್ ಸೀಳಿನ್, ರವೀಂದ್ರ ಸೊರಗಾವಿ, ಇಮ್ತಿಯಾಜ್ ಸುಲ್ತಾನ್ ಹಾಡಿದ್ದಾರೆ. ಸಿನಿಮಾ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು. ಹೃದಯಶಿವ ಅವರು ನಿರ್ದೇಶನದ ಜೊತೆಗೆ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.