ನಟ ಸುದೀಪ್ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಮಾಡಿರುವ ಸಾಧನೆ ಅಪಾರ. ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಕಿಚ್ಚ ಹೊಂದಿದ್ದಾರೆ. ವಿದೇಶಗಳಲ್ಲೂ ಹೆಸರು ಮಾಡಿದ್ದಾರೆ. ಅಭಿನಯದಲ್ಲಿ ಎಂದಿಗೂ ಎತ್ತಿದ ಕೈ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು 25 ವರ್ಷಗಳನ್ನು ಪೂರೈಸಿರುವ ನಟ ಸುದೀಪ್ ಅವರಿಗೆ ಈಗಾಗಲೇ ಅನೇಕರಿಂದ ಗೌರವ, ಸನ್ಮಾನಗಳು ಸಂದಿರುವುದು ಗೊತ್ತೇ ಇದೆ.
ಇದೀಗ ಹೆಬ್ಬುಲಿ ಸುದೀಪ್ ಅವರ ಸಾಧನೆಯನ್ನು ಗೌರವಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುತ್ತಿದೆ. ಭಾರತ ಸರ್ಕಾರದ ಅಂಚೆ ಇಲಾಖೆಯು, ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷಗಳ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತದೆ. ಅದೇ ಪ್ರಕಾರ 25 ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ದೇಶದ ತಾರೆ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ.