ಟೀಸರ್ ಹಾಗು ಹಾಡುಗಳಿಂದ ಸ್ಯಾಂಡಲ್ವುಡ್ನಲ್ಲಿ ಸುದ್ದಿಯಲ್ಲಿರೋ ಸಿನಿಮಾ 'ಹೊಂದಿಸಿ ಬರೆಯಿರಿ'. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲಾವಿದರ ದಂಡು ಚಿತ್ರದಲ್ಲಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
'ಐವರು ಸ್ನೇಹಿತರ 12 ವರ್ಷದ ಪಯಣ':ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ, "ಹೊಂದಿಸಿ ಬರೆಯಿರಿ ಎಂದಾಗ ನೆನಪಾಗೋದು ಬಾಲ್ಯ. ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಹೋಗಬೇಕು, ಬದುಕು ಬಂದಂತೆ ಸ್ವೀಕರಿಸಿ ಅನ್ನೋದು ಈ ಚಿತ್ರದ ಆಶಯ. ಐವರು ಸ್ನೇಹಿತರ ಹನ್ನೆರಡು ವರ್ಷದ ಜರ್ನಿ ಚಿತ್ರದಲ್ಲಿದೆ. ಕಾಲೇಜು, ಕಾಲೇಜು ನಂತರದ ದಿನಗಳು, ಮದುವೆ ಈ ಪಯಣವನ್ನು ಚಿತ್ರ ಒಳಗೊಂಡಿದೆ. ಬಹಳ ಜನರಿಗೆ ಈ ಸಿನಿಮಾ ಕನೆಕ್ಟ್ ಆಗಲಿದೆ. ಚಿತ್ರಕ್ಕೆ ಟೈಟಲ್ ನೀಡಿದ್ದು ಮಾಸ್ತಿ ಸರ್. ನನಗೆ ಈ ಚಿತ್ರ ಹೊಸತು. ಇಲ್ಲಿ ನಟಸಿರೋರೆಲ್ಲ ಅನುಭವಿಗಳು. ಹಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾ ಕೆಲಸ ಆರಂಭಿಸಿದೆವು" ಎಂದು ತಿಳಿಸಿದರು.
ನಟ, ನಟಿಯರ ಪ್ರತಿಕ್ರಿಯೆ:ನಟ ಪ್ರವೀಣ್ ತೇಜ್ ಮಾತನಾಡಿ, "ನಮ್ಮ ಚಿತ್ರದ ನಿಜವಾದ ನಾಯಕರೆಂದರೆ ನಿರ್ದೇಶಕ ಹಾಗೂ ನಿರ್ಮಾಪಕ ರಾಮೇನಹಳ್ಳಿ ಜಗನ್ನಾಥ್. ಒಂದೊಳ್ಳೆ ತಂಡವನ್ನು ಕಟ್ಟಿಕೊಂಡು ಎಲ್ಲರನ್ನೂ ನಿಭಾಯಿಸಿ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಅನುಭವವನ್ನು ಸಿನಿಮಾ ನೀಡಿದೆ" ಎಂದು ತಿಳಿಸಿದ್ರು.
ನಟಿ ಭಾವನ ರಾವ್ ಮಾತನಾಡಿ, "ಹೊಂದಿಸಿ ಬರೆಯಿರಿ ಕಥೆ ಕೇಳಿದಾಗ ಸಿಂಪಲ್ ಕಥೆ ಆದ್ರೆ ಇದರಲ್ಲಿ ಬರುವ ಪಾತ್ರಗಳು ತುಂಬಾ ಕಾಂಪ್ಲಿಕೇಟ್ ಅನ್ನಿಸ್ತು. ಕೆಲವು ಸನ್ನಿವೇಶಗಳಿಂದ ನಾವು ಜೀವನವನ್ನು ಕಾಂಪ್ಲಿಕೇಟ್ ಮಾಡಿಕೊಳ್ಳುತ್ತೇವೆ. ಅದೇ ವಿಚಾರ ಚಿತ್ರದಲ್ಲಿದೆ. ಚಿತ್ರದಲ್ಲಿ ನಾನು ಭೂಮಿಕ ಪಾತ್ರ ನಿರ್ವಹಿಸಿದ್ದೇನೆ. ನಿರ್ದೇಶಕರು ಸಿನಿಮಾ ಬಗ್ಗೆ ಆರಂಭದಿಂದಲೂ ತುಂಬಾ ಕ್ಲಿಯರ್ ಆಗಿದ್ದರು, ಇಂತಹ ಬ್ಯೂಟಿಫುಲ್ ಸಿನಿಮಾ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳು" ಎಂದರು.
ಜೀವನ ಕುರಿತ ಕಥೆ:ನಟ ಶ್ರೀ ಮಹದೇವ್ ಮಾತನಾಡಿ, "ಹೊಂದಿಸಿ ಬರೆಯಿರಿ ಎಂದಾಗ ಬಾಲ್ಯ ನೆನಪಾಗುತ್ತದೆ. ಆದ್ರೆ ಕೇವಲ ಬಾಲ್ಯ ಅಲ್ಲ, ಜೀವನ ಹೇಗೆ ನಡೆಯುತ್ತದೆ, ನಾವು ಹೇಗಿರಬೇಕು, ಚಿಕ್ಕ ತಪ್ಪು ಎಷ್ಟು ದೊಡ್ಡದಾಗುತ್ತೆ ಎಲ್ಲವೂ ಸಿನಿಮಾದಲ್ಲಿ ರಿಯಲೈಝ್ ಆಗುತ್ತದೆ. ಇಡೀ ಸಿನಿಮಾವನ್ನು ಮಾತಲ್ಲಿ ಹೇಳೋಕಾಗಲ್ಲ ಅಷ್ಟು ಡೆಪ್ತ್ ಆಗಿದೆ ಕಾನ್ಸೆಪ್ಟ್. ನನಗಿದು ಬಹಳಾನೇ ಸ್ಪೆಶಲ್. ನಾಲ್ಕರಿಂದ ಐದು ಲುಕ್ನಲ್ಲಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾ ಗೆಲ್ಲುವ ವಿಶ್ವಾಸದಲ್ಲಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ" ಎಂದು ಮನವಿ ಮಾಡಿದರು.
"ಹೊಂದಿಸಿ ಬರೆಯಿರಿ ಸಿನಿಮಾ ಒಪ್ಪಿಕೊಳ್ಳಲು ಮೊದಲ ಕಾರಣ ಸಿನಿಮಾದ ಕಥೆ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಪಾತ್ರಗಳು ಬದುಕಿಗೆ ಬಹಳ ಹತ್ತಿರವಾಗುತ್ತದೆ. ಮೊದಲ ಸಿನಿಮಾದಲ್ಲೇ ಉತ್ತಮ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ನಾನು ಸನಿಹ ಪಾತ್ರ ಮಾಡಿದ್ದೇನೆ. ಈ ಪಾತ್ರ ಹಾಗೂ ಚಿತ್ರದ ಭಾಗವಾಗಿರೋದಕ್ಕೆ ನನಗೆ ಬಹಳ ಹೆಮ್ಮೆಯಿದೆ" ಎಂದು ನಟಿ ಐಶಾನಿ ಶೆಟ್ಟಿ ಹೇಳಿದರು