ಟೀಸರ್, ಟೈಟಲ್ ಹಾಗು ಹಾಡುಗಳಿಂದ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿರೋ ಕನ್ನಡ ಚಿತ್ರರಂಗದ ಸಿನಿಮಾ ಹೊಂದಿಸಿ ಬರೆಯಿರಿ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರ ಇದು. ಬಹು ತಾರಾಗಣದ ಹೊಂದಿಸಿ ಬರೆಯಿರಿ ಸಿನಿಮಾ ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಿದೆ.
'ನೀ ಇರದ ನಾಳೆ ಬೇಕಿಲ್ಲ ನನಗೆ' ಬಿಡುಗಡೆ:ಸದ್ಯ ಬಿಡುಗಡೆಯ ಸನಿಹದಲ್ಲಿರುವ ಚಿತ್ರ ತಂಡ ಪ್ರಚಾರ ಕಾರ್ಯವನ್ನು ಬಿಡುವಿಲ್ಲದೇ ನಡೆಸುತ್ತಿದೆ. ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ನೀ ಇರದ ನಾಳೆ ಬೇಕಿಲ್ಲ ನನಗೆ ಹಾಡಿನ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಈ ಹಾಡನ್ನು ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಜೊತೆಗೆ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟು ಎಂಟು ಹಾಡುಗಳಿರುವ ಸಿನಿಮಾ: ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಪ್ರತಿ ಹಾಡುಗಳು ಸಿನಿಮಾದಲ್ಲಿ ಬಹು ಮುಖ್ಯ ಪಾತ್ರ ವಹಿಸಲಿವೆ. ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು ಪ್ರೇಕ್ಷಕರ ಮನ ಗೆದ್ದಿದ್ದು, ಇದೀಗ ಚಿತ್ರದ ಮತ್ತೊಂದು ಬಹು ನಿರೀಕ್ಷಿತ ಹಾಡು ನೀ ಇರದ ನಾಳೆ ಬೇಕಿಲ್ಲ ನನಗೆ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಈ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಸಂಬಂಧಗಳಲ್ಲಿರುವ ಗೊಂದಲವನ್ನು ವ್ಯಕ್ತಪಡಿಸುವ ಹಾಡು ಇದಾಗಿದೆ. ಪ್ರವೀಣ್ ತೇಜ್, ಭಾವನಾ ರಾವ್ ಈ ಹಾಡಿನ ಭಾಗವಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬರುವ ಹಾಡು ಇದು.
ಚಿತ್ರ ತಂಡ: ಕೀರ್ತನ್ ಹೊಳ್ಳ, ಐಶ್ವರ್ಯ ರಂಗರಾಜನ್ ಹಾಡಿಗೆ ದನಿಯಾಗಿದ್ದು, ಜೋ ಕೋಸ್ಟ್ ಸಂಗೀತ ನಿರ್ದೇಶನದ ಹಾಡಿಗಿದೆ. ಅನಿರುದ್ಧ್ ಆಚಾರ್ಯ, ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ಬಹು ದೊಡ್ಡ ತಾರಾಬಳಗ ಈ ಸಿನಿಮಾದಲ್ಲಿದೆ.