'ಕೆಜಿಎಫ್ ಚಾಪ್ಟರ್ 1' ಕನ್ನಡ ಚಿತ್ರರಂಗ ಮರೆಯಲಾಗದ ಸಿನಿಮಾ. ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ನತ್ತ ಗಮನ ಕೇಂದ್ರೀಕರಿಸುವಂತೆ ಮಾಡಿದ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಮಾತ್ರವಲ್ಲದೇ ಕನ್ನಡ ಸಿನಿಮಾ ರಂಗವನ್ನು ಉತ್ತುಂಗಕ್ಕೇರಿಸಿದ ಸೂಪರ್ ಹಿಟ್ ಸಿನಿಮಾವಿದು.
2018ರ ಡಿಸೆಂಬರ್ 21ರಂದು ಚಿತ್ರ ಬಿಡುಗಡೆ ಆಗಿ ಥಿಯೇಟರ್ಗಳಲ್ಲಿ ಧೂಳೆಬ್ಬಿಸಿತ್ತು. ರಾಕಿಂಗ್ ಸ್ಟಾರ್ ಯಶ್ ಆ್ಯಕ್ಷನ್ ಸನ್ನಿವೇಶಗಳು, ಸೆಂಟಿಮೆಂಟ್ ಸೀನಗಳಂತೂ ಈಗಲೂ ಅಭಿಮಾನಿಗಳ ಕಣ್ಮುಂದೆ ಇದೆ. ಅದರ ಮುಂದುವರಿದ ಭಾಗ ಕೆಜಿಎಫ್ ಚಾಪ್ಟರ್ 2 ಕೂಡ ನಿರೀಕ್ಷೆಗೂ ಮೀರಿ ಸಿನಿ ಅಂಗಳದಲ್ಲಿ ಸದ್ದು ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೇ ಇತರೆ ಭಾಷೆಯಲ್ಲೂ ಅಬ್ಬರಿಸಿತು. ಡಿಸೆಂಬರ್ 21 ಅಂದರೆ ನಿನ್ನೆಗೆ ಈ ಚಿತ್ರ ಬಿಡುಗಡೆ ಆಗಿ 4 ವರ್ಷ ತುಂಬಿದೆ. ಈ ದಿನವನ್ನು ನೆನೆದ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹರ್ಷ ವ್ಯಕ್ತಪಡಿಸಿದೆ.
''ಈ ದಿನಾಂಕ ಮತ್ತು ಚಲನಚಿತ್ರವು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಾವು ಊಹಿಸಿದ್ದೇವೆ, ನಾವು ನಂಬಿದ್ದೇವೆ, ನಾವು ಗೆದ್ದಿದ್ದೇವೆ. ಲೆಕ್ಕವಿಲ್ಲದಷ್ಟು ನೆನಪುಗಳು ಮತ್ತು ಈ ಕನಸನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು'' ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.