'ಕೆಜಿಎಫ್ ಚಾಪ್ಟರ್ 2' ದೊಡ್ಡಮಟ್ಟದ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ನ ಸಿನಿಮೋತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಹೊಂಬಾಳೆ ಸಂಸ್ಥೆಯಡಿ 14ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ನಡುವೆ ಮತ್ತೊಂದು ಪ್ಯಾನ್ ಇಂಡಿಯಾ ವೆಂಚರ್ಗೆ ನಿರ್ಮಾಣ ಸಂಸ್ಥೆ ನಾಂದಿ ಹಾಡಿದೆ.
ಯಾವಾಗಲೂ ಹೊಸ ಕಥೆ, ಹೊಸ ನಿರ್ದೇಶಕ ಹಾಗೂ ಸ್ಟಾರ್ಗಳ ಸಿನಿಮಾಗಳಿಗೆ ಕೋಟಿಗಟ್ಟಲೆ ಬಂಡವಾಳ ಹೂಡುವ ನಿರ್ಮಾಪಕ ವಿಜಯ್ ಕಿರಂಗದೂರ್, ಈ ಬಾರಿ ಮಲೆಯಾಳಂ ಸ್ಟಾರ್ ನಟನನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ನಿನ್ನೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಸ್ವ್ಯಾಗ್ ಪಂಚ್ ಸ್ವಿಂಗ್ ಎಂಬ ವಿಭಿನ್ನ ಪೋಸ್ಟರ್ ಮೂಲಕ ಹೊಂಬಾಳೆ ಫಿಲ್ಮ್ಸ್ ಕುತೂಹಲ ಹುಟ್ಟಿಸಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ನೀಡಿದೆ.
ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಜೊತೆ ಹೊಂಬಾಳೆ ಸಂಸ್ಥೆ ಪ್ಯಾನ್ ಇಂಡಿಯಾ ಸಿನೆಮಾ ಮಾಡುತ್ತಿದೆ. 'ಟೈಸನ್' ಅಂತಾ ಶೀರ್ಷಿಕೆ ಇಡಲಾಗಿದ್ದು, ಪೋಸ್ಟರ್ ಕೂಡ ಅನಾವರಣಗೊಂಡಿದೆ. ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಲಾಂಚ್ಗೆ ಬಂದಿದ್ದ ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನಟನೆ ಜೊತೆಗೆ ನಿರ್ದೇಶನ, ನಿರ್ಮಾಣ ಹಾಗೂ ಗಾಯನದ ಮೂಲಕ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ.
ವೃದ್ಧರೊಬ್ಬರು ಬೋರ್ಡ್ ಮೇಲೆ ಹೆಸರು ಬರೆಯುತ್ತಿರುವ ಪೋಸ್ಟರ್ ಇದಾಗಿದೆ. ಈ ಪೋಸ್ಟರ್ ನೋಡಿದರೆ ಸರ್ಕಾರಿ ಕಚೇರಿಗಳಲ್ಲಿ ದೊಡ್ಡ ಅಧಿಕಾರಿ ವರ್ಗಾವಣೆ ಆದಾಗ ಅವರು ಎಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಎಂಬುದನ್ನು ಈ ಪೋಸ್ಟರ್ ಸೂಚಿಸುವಂತಿದೆ. ಚಿತ್ರದಲ್ಲಿ ಪೃಥ್ವಿರಾಜ್ ನಿರ್ದೇಶನದ ಜೊತೆಗೆ ಅಭಿನಯಿಸುತ್ತಿದ್ದಾರೆ. ಮುರಳಿ ಗೋಪಿ ಎಂಬುವರು ಸಿನಿಮಾದ ಕಥೆ ಬರೆದಿದ್ದು, ನಿರ್ಮಾಪಕ ವಿಜಯ್ ಕಿರಂಗದೂರ್ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಿಕಿನಿ, ಬಿಂದಿ ಮತ್ತು ಬಳೆ: 22 ವರ್ಷದ ಹಳೆಯ ಫೋಟೋ ಹಂಚಿಕೊಂಡ ಪ್ರಿಯಾಂಕಾ