ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಶಾರುಖ್ ಖಾನ್ ಅವರ ಸಿನಿಮಾ ನಿರ್ಮಿಸಲಿದೆ ಎನ್ನುವ ಮಾಹಿತಿ ನಿನ್ನೆಯಷ್ಟೇ ಹೊರಬಿದ್ದಿತ್ತು. ಕೆಜಿಎಫ್ 1, ಕೆಜಿಎಫ್ 2 ಮತ್ತು ಕಾಂತಾರ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರೋ ನಿರ್ಮಾಪಕ ವಿಜಯ್ ಕಿರಂಗದೂರ್ ಈಗ ಕಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇದೀಗ ಸೌತ್ ಸುಂದರಿ ಕೀರ್ತಿ ಸುರೇಶ್ ಅವರ ಮುಂದಿನ ಸಿನಿಮಾ ನಿರ್ಮಾಣ ಮಾಡಲಿದೆ ಎನ್ನುವ ಮತ್ತೊಂದು ಸುದ್ದಿ ಕೊಟ್ಟಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವಿಟರ್ ಖಾತೆಯಲ್ಲಿ ಅಧಿಕೃತ ಘೋಷಣೆ ಮಾಡಿದೆ. ಕೀರ್ತಿ ಸುರೇಶ್ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, 'ಮನೆಯಿಂದಲೇ ಕ್ರಾಂತಿ ಆರಂಭವಾಗಬಹುದು, ತಯಾರಾಗಿರಿ' ಎಂದು ಕ್ಯಾಪ್ಷನ್ ಕೊಟ್ಟಿದೆ.
ಸದ್ಯ ಚಿತ್ರಕ್ಕೆ ರಘು ತಥಾ (Raghu Thatha) ಎಂದು ಶೀರ್ಷಿಕೆ ಕೊಟ್ಟಿದೆ. ನಟಿ ಕೀರ್ತಿ ಸುರೇಶ್ ಅಭಿನಯದ ಚಿತ್ರದಲ್ಲಿ ಹಿರಿಯ ನಟ ಎಂ ಎಸ್ ಭಾಸ್ಕರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ವಿಜಯ್ ಕಿರಂಗದೂರ್ ನಿರ್ಮಾಣದ ಚಿತ್ರವನ್ನು ಸುಮನ್ ಭಾಸ್ಕರ್ ನಿರ್ದೇಶಿಸಲಿದ್ದಾರೆ. ಯಾಮಿನಿ ಯಜ್ಞಮೂರ್ತಿ ಕ್ಯಾಮರಾ ವರ್ಕ್ ಇದ್ದು, ಉಳಿದ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ.
ಇದನ್ನೂ ಓದಿ:ಶಾರುಖ್ ಸಿನಿಮಾ ನಿರ್ಮಿಸಲಿದೆ ಹೊಂಬಾಳೆ ಫಿಲ್ಮ್ಸ್: ಕಿಂಗ್ ಖಾನ್ ಜೊತೆ ಸ್ಯಾಂಡಲ್ವುಡ್ ಶೆಟ್ರು
ನಟಿ ಕೀರ್ತಿ ಸುರೇಶ್ ಸಹ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರತಂಡದೊಂದಿಗಿನ ಫೋಟೋ ಶೇರ್ ಮಾಡಿರುವ ಅವರು Yek gaav mein yek kisan ಅಂದರೆ ಒಂದು ಹಳ್ಳಿಯಲ್ಲಿ ಓರ್ವ ರೈತ ಎಂದು ಬರೆದುಕೊಂಡಿದ್ದಾರೆ. ಸಿನಿಮಾದ ಫೋಸ್ಟರ್ ಕ್ಯಾಪ್ಷನ್ ನೋಡುತ್ತಿದ್ದರೆ, ಒಂದು ಹಳ್ಳಿಯ ಮತ್ತು ರೈತನ ಕಥೆ ಎನಿಸುತ್ತಿದೆ. ಎಂ ಎಸ್ ಭಾಸ್ಕರ್ ರೈತನಾಗಿ ಮತ್ತು ಅವರ ಮೊಮ್ಮಗಳಾಗಿ ಕೀರ್ತಿ ಸುರೇಶ್ ಅಭಿನಯಿಸಲಿದ್ದಾರೆ, ಜೊತೆಗೆ ಸಮಾಜಕ್ಕೆ ಸಂದೇಶ ಕೊಡುವ ಚಿತ್ರವಿದು ಅನ್ನೋದು ಹೊಂಬಾಳೆ ಫಿಲ್ಮ್ಸ್ ಶೇರ್ ಮಾಡಿರುವ ಪೋಸ್ಟರ್ ಸುಳಿವು.