ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದ ಬ್ಲಾಕ್ಬಸ್ಟರ್ ಸಿನಿಮಾಗಳು ಮೂಡಿಬಂದಿವೆ. ಕೆಜಿಎಫ್ 1, ಕೆಜಿಎಫ್ 2 ಮತ್ತು ಕಾಂತಾರ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರೋ ನಿರ್ಮಾಪಕ ವಿಜಯ್ ಕಿರಗಂದೂರು ಕಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರುವುದು ಗೊತ್ತಿರುವ ವಿಚಾರ. 'ರಘು ತಾತಾ' ಎಂಬ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಅಪ್ಡೇಟ್ ನೀಡಿತ್ತು. ಇದೀಗ 'ರಘು ತಾತಾ' ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಅತ್ಯಂತ ಶೀಘ್ರದಲ್ಲೇ ಸಿನಿಮಾ ನಿಮ್ಮ ಮುಂದೆ ಬರಲಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಅದಕ್ಕಾಗಿ ಹಂಚಿಕೊಂಡಿರುವ ಝಲಕ್ ಕೂಡ ಚೆನ್ನಾಗಿದೆ. ಗ್ಲಿಂಪ್ಸ್ನಲ್ಲಿ ಯಾವುದೇ ಪಾತ್ರಗಳ ಪರಿಚಯ ಮಾಡದ ಚಿತ್ರತಂಡ ಸಿನಿಮಾದ ಕುತೂಹಲ ಹೆಚ್ಚಿಸಿದೆ. ಕೇವಲ ಸಿನಿಮಾ ಪೋಸ್ಟರ್ ತಳ್ಳುತ್ತಾ ಮೈಕ್ನಲ್ಲಿ ಅನೌನ್ಸ್ ಮಾಡುತ್ತಾ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ದಶಕಗಳ ಹಿಂದಿನ ಸಿನಿಮಾ ಪ್ರಮೋಷನ್ ಸ್ಟೈಲ್ ಅನ್ನು ಇದೀಗ ಬಳಸಿಕೊಂಡಿರುವ 'ರಘು ತಾತಾ' ಚಿತ್ರತಂಡ ಏನು ಹೇಳಲು ಹೊರಟಿದೆ ಎನ್ನುವುದನ್ನು ಥಿಯೇಟರ್ನಲ್ಲಿ ನೋಡಬೇಕಿದೆ. ಸಿನಿಮಾಗೆ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ನಾಯಕಿಯಾಗಿದ್ದಾರೆ. ಹಿರಿಯ ನಟ ಎಂ.ಎಸ್ ಭಾಸ್ಕರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. 'ರಘು ತಥಾ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಯುವತಿಯೊಬ್ಬಳ ಸುತ್ತ ಕಥೆ ಹೆಣೆಯಲಾಗಿದೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ಸೇರಿದಂತೆ ಇತರ ಸಿನಿಮಾಗಳಿಗೆ ಕಥೆ - ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ 'ರಘು ತಾತಾ'ವನ್ನು ನಿರ್ದೇಶನ ಮಾಡುತ್ತಿದ್ದಾರೆ.