ಸಿನಿಮಾ ನಿರ್ದೇಶನ ಅಲ್ಲದೇ ಇಂದಿನ ಟ್ರೆಂಡಿಗ್ಗೆ ತಕ್ಕಂತೆ ಹಾಡುಗಳನ್ನು ಬರೆಯುವ ವಿಕಟಕವಿ ಅಂದ್ರೆ ಯೋಗರಾಜ್ ಭಟ್. ಸದ್ಯ ಗರಡಿ ಸಿನಿಮಾದಲ್ಲಿ ಬ್ಯುಸಿಯಾಗಿರೋ ಭಟ್ರು ಬರೆದಿರೋ ಹೊಡಿರೆಲೆ ಹಲಗಿ ಹಾಡು ಸಿನಿ ಪ್ರಿಯರ ಮನಸ್ಸು ಗೆದ್ದಿದೆ. 'ಹೊಡಿರೆಲೆ ಹಲಗಿ' ಹಾಡನ್ನು ಮಿಲಿಯನ್ಗಟ್ಟಲೆ ಜನರು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿರುವ, ಯಶಸ್ ಸೂರ್ಯ ಹಾಗೂ ಕೌರವ ಖ್ಯಾತಿಯ ಬಿ.ಸಿ ಪಾಟೀಲ್ ಅಭಿನಯಿಸಿರುವ 'ಗರಡಿ' ಸಿನಿಮಾದ 'ಹೊಡಿರೆಲೆ ಹಲಗಿ' ಹಾಡನ್ನು ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿತ್ತು. ಈ ಹಾಡಿನ ಮಾಧುರ್ಯಕ್ಕೆ ಕನ್ನಡಿಗರು ಮನ ಸೋತಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡನ್ನು 16ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾಡಿಗೆ ಪ್ರಶಂಸೆಯ ಮಳೆ ಸುರಿಸುತ್ತಿದ್ದಾರೆ. ಮುಂದಿನ ಹಾಡು ಯಾವಾಗ ಬಿಡುಗಡೆಯಾಗಲಿದೆ? ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು. ಮೊದಲ ಹಾಡಿಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ "ಗರಡಿ" ತಂಡ ಸಂತಸ ವ್ಯಕ್ತಪಡಿಸಿದೆ.
ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ನಟಿ ನಿಶ್ವಿಕಾ ನಾಯ್ಡು ಮೊದಲ ಬಾರಿಗೆ ಸ್ಪೆಷಲ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಉತ್ತರ ಕರ್ನಾಟಕದ ಕಾಸ್ಟೂಮ್ ತೊಟ್ಟು ಈ ಬೊಂಬಾಟ್ ಹಾಡಿಗೆ ನಿಶ್ವಿಕಾ ನಾಯ್ಡು ಮೈ ಕುಣಿಸಿದ್ದಾರೆ. ಸದ್ಯ ಈ ಹಾಡು ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗಿದೆ.