ಕರ್ನಾಟಕ

karnataka

ETV Bharat / entertainment

16 ವರ್ಷಗಳ ಹಿಂದೆಯೇ ಮೂಡಿ ಬಂದಿತ್ತು ಕಾಂತಾರದ ವಾ ಪೊರ್ಲುಯ ಹಾಡು

ವಾ ಪೊರ್ಲುಯ ಹಾಡು ಸುಮಾರು 16 ವರ್ಷಗಳ ಹಿಂದೆ ತಯಾರಾದ ಹಾಡು.ಈ ಹಾಡಿನ ಸಾಹಿತ್ಯ ರಚಿಸಿದವರು ಕವಿ ಶಶಿರಾಜ್ ಕಾವೂರು. ಹಾಡು ಹಾಡಿದವರು ಮೈಮ್ ರಾಮ್ ದಾಸ್. ಸಿರಿ ಚಾನೆಲ್ ಮೂಲಕ ಈ ಹಾಡನ್ನು ಹೊರತರಲಾಗಿತ್ತು.

history of va porluya song of kantara movie
16 ವರ್ಷಗಳ ಹಿಂದೆಯೇ ಮೂಡಿ ಬಂದಿತ್ತು ಕಾಂತಾರದ ವಾ ಪೊರ್ಲುಯ ಹಾಡು

By

Published : Oct 15, 2022, 2:10 PM IST

ಮಂಗಳೂರು (ದಕ್ಷಿಣ ಕನ್ನಡ):ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಕಾಂತಾರದ ವಿಭಿನ್ನ ಪಾತ್ರಗಳು, ವಿಭಿನ್ನ ವಿಚಾರಗಳೀಗ ಚರ್ಚೆಗಳಾಗುತ್ತಿದೆ. ಈ ಕನ್ನಡ ಸಿನಿಮಾದಲ್ಲಿ ತುಳು ಭಾಷೆಯ ಸೂಪರ್ ಹಿಟ್ ಹಾಡೊಂದು ಸೇರಿಕೊಂಡಿರುವುದು ವಿಶೇಷ.

ಈ ತುಳು ಹಾಡು ಹಾಡಿದವರು ಮೈಮ್ ರಾಮ್ ದಾಸ್. ರಂಗ ಕಲಾವಿದ, ಚಿತ್ರ ನಟ ಮೈಮ್ ರಾಮ್ ದಾಸ್ ಕರಾವಳಿಯ ಖ್ಯಾತ ಹಾಡುಗಾರ ಕೂಡ ಹೌದು. ಇವರು ತುಳು, ಕನ್ನಡ ರಂಗ ಕಲಾವಿದರಾಗಿ, ಸಿನಿಮಾ ಕಲಾವಿದನಾಗಿ ನಟಿಸಿದ್ದಾರೆ. ರಾಜ್ ಶೆಟ್ಟಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸಿನಿಮಾಗಳಲ್ಲಿ ಇವರು ಸಹಜವಾಗಿ ಕೆಲಸ ಮಾಡುತ್ತಾರೆ. ಅದರಂತೆ ಕಾಂತಾರ ಸಿನಿಮಾದಲ್ಲೂ ಸೇರಿಕೊಂಡಿದ್ದಾರೆ.

ಮೈಮ್ ರಾಮ್ ದಾಸ್

ಕಾಂತಾರ ಸಿನಿಮಾ ನೋಡಿದವರಿಗೆ ವಾ ಪೊರ್ಲುಯ ಎಂಬ ತುಳು ಹಾಡು ನೆನಪಿಗೆ ಬರಬಹುದು. ದೈವ ಪಾತ್ರದ ಹಿನ್ನೆಲೆಯಲ್ಲಿ ಈ ಹಾಡು ಮೂಡಿ ಬಂದಿದೆ. ಈ ಹಾಡು ಹಾಡಿದವರು ಮೈಮ್ ರಾಮ್ ದಾಸ್.

ಈ ಹಾಡನ್ನು ಈ ಸಿನಿಮಾಕ್ಕಾಗಿಯೇ ರಚನೆ ಮಾಡಿರುವಂತದದ್ದಲ್ಲ. ವಾ ಪೊರ್ಲುಯ ಎಂಬ ಹಾಡು ಸುಮಾರು 16 ವರ್ಷಗಳ ಹಿಂದೆ ತಯಾರಾದ ಹಾಡು. ಈ ಹಾಡಿನ ಸಾಹಿತ್ಯ ರಚಿಸಿದವರು ಕವಿ ಶಶಿರಾಜ್ ಕಾವೂರು. ಹಾಡು ಹಾಡಿದವರು ಮೈಮ್ ರಾಮ್ ದಾಸ್. ಸಿರಿ ಚಾನೆಲ್ ಮೂಲಕ ಈ ಹಾಡನ್ನು ಹೊರತರಲಾಗಿತ್ತು.

ಮೈಮ್ ರಾಮ್ ದಾಸ್

ಆ ಸಂದರ್ಭದಲ್ಲಿ ಈ ಹಾಡು ಕೇಳುಗರಿಗೆ ವಿಭಿನ್ನ ಎನಿಸಿತ್ತು. ಭೂತ ಕೋಲದಲ್ಲಿ ಬಳಸಲಾಗುವ ವಾದ್ಯಗಳನ್ನು ಬಳಸಲಾಗಿತ್ತು. ದೈವಗಳನ್ನು ವರ್ಣನೆ ಮಾಡುವ ಸಾಹಿತ್ಯ ಮತ್ತು ಭೂತ ಕೋಲಗಳಲ್ಲಿ ಬಳಸಲಾಗುವ ಜಾನಪದೀಯ ಟ್ಯೂನ್ ಅನ್ನು ವಿಸ್ತಾರ ಮಾಡಿ ಈ ಹಾಡು ರಚಿಸಲಾಗಿತ್ತು. ಈ ಹಾಡು ಬಳಿಕ ಕರಾವಳಿಯಲ್ಲಿ ಸೂಪರ್ ಹಿಟ್ ಆಗಿತ್ತು. ವಿವಿಧ ಸಮಾರಂಭಗಳಲ್ಲಿ ಈ ಹಾಡು ಬಳಸಲಾಗುತ್ತಿತ್ತು. ಒಂದು ರೀತಿಯಲ್ಲಿ ಇದು ಜಾನಪದೀಯ ಹಾಡೆಂಬ ರೀತಿಯಲ್ಲಿ ಜನಮನ್ನಣೆ ಗಳಿಸಿತ್ತು.

ಇದೀಗ ಈ ಹಾಡು ಕಾಂತಾರದಲ್ಲಿ ಕೇಳಿ ಬಂದಿದೆ. ದೈವದ ಹಿನ್ನೆಲೆಯಲ್ಲಿ ಈ ಹಾಡು ಬಂದು ಹೋಗುತ್ತದೆ. ಈ ಹಾಡು ತುಳುವಿನಲ್ಲಿ ಇದ್ದರೂ ಈ ಸಿನಿಮಾಕ್ಕೆ ಭಾಷಾ ತೊಡಕಾಗಿಲ್ಲ. ಈ ಸಿನಿಮಾಕ್ಕಾಗಿ ಕನ್ನಡದಲ್ಲಿ ಹಾಡನ್ನು ಹಾಡಲು ತಯಾರಿದ್ದರೂ ಮೂಲ ತುಳುವಿನಲ್ಲಿ ಹಾಡಲು ರಿಷಬ್ ಅವರು ತಿಳಿಸಿದ್ದು, ಅದರಂತೆ ಈ ಹಾಡನ್ನು ತುಳುವಿನಲ್ಲಿ ಹಾಡಿದ್ದಾರೆ. ಟ್ಯೂನ್ ಮತ್ತು ಸಾಹಿತ್ಯದಲ್ಲಿ ಯಾವೊಂದು ಬದಲಾವಣೆ ಮಾಡದೇ ಈ ಹಾಡನ್ನು ಕಾಂತಾರದಲ್ಲಿ ಮತ್ತೊಮ್ಮೆ ಹಾಡಲಾಗಿದೆ.

ರಿಷಬ್​ ಶೆಟ್ಟಿಯೊಂದಿಗೆ ಮೈಮ್ ರಾಮ್ ದಾಸ್

ರಿಷಬ್ ಶೆಟ್ಟಿ ಅವರ ಸಿನಿಮಾಗಳ ಜೊತೆ ಮೈಮ್ ರಾಮ್ ದಾಸ್ ಅವರು ಸಹಜವಾಗಿ ಇರುತ್ತಾರೆ. ಸಿನಿಮಾ ತಯಾರಿ ನಡೆಯುತ್ತಿರುವಾಗಲೇ ರಿಷಬ್ ಶೆಟ್ಟಿ ಕಾಂತಾರ ತಂಡದೊಟ್ಟಿರಬೇಕು ಎಂದು ತಿಳಿಸಿದ್ದರಂತೆ. ಕಾಂತಾರ ಸಿನಿಮಾಗೆ ಓ ಪೊರ್ಲುಯ ಹಾಡಿನ ಅವಶ್ಯಕತೆ ಇದೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದು, ಅದರಂತೆ 16 ವರ್ಷಗಳ ಹಳೆಯ ಹಾಡನ್ನು ಕಾಂತಾರಕ್ಕಾಗಿ ಮತ್ತೊಮ್ಮೆ ಹಾಡಿದ್ದಾರೆ ಮೈಮ್ ರಾಮ್ ದಾಸ್.

ಇದನ್ನೂ ಓದಿ:ಕೆಜಿಎಫ್​, ಚಾರ್ಲಿ, ಆರ್​ಆರ್​ಆರ್ ದಾಖಲೆ ಬ್ರೇಕ್​ ಮಾಡಿದ ಕಾಂತಾರ

ಓ ಪೊರ್ಲುಯ ಹಾಡನ್ನು ಕಾಂತರಕ್ಕೆ ಹಾಡಿದ ಬಗ್ಗೆ ಮೈಮ್ ರಾಮ್ ದಾಸ್ ಅವರು ಈಟಿವಿ ಭಾರತ ಜೊತೆಗೆ ಮಾತನಾಡಿದ್ದು, ಓ ಪೊರ್ಲುಯ ಹಾಡು 16 ವರ್ಷಗಳ ಹಿಂದೆ ರಚಿತವಾದರೂ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ. ಈ ಹಾಡನ್ನು ಬೇರೆ ಬೇರೆ ಸಂದರ್ಭದಲ್ಲಿ ಸಿನಿಮಾಕ್ಕಾಗಿ ಬಳಸಲು ಕೇಳಿದ್ದರೂ ಅನುಮತಿ ಕೊಟ್ಟಿರಲಿಲ್ಲ. ಆದರೆ ರಿಷಬ್ ಶೆಟ್ಟಿ ಅವರು ಸಿನಿಮಾಗೆ ಈ ಹಾಡಿನ ಅವಶ್ಯಕತೆ ಇದೆ ಎಂದು ತಿಳಿಸಿದಾಗ ಅದನ್ನು ನೀಡಲಾಯಿತು. ಈ ಮೂಲಕ ಕರಾವಳಿಯ ಈ ಹಾಡು ಎಲ್ಲೆಡೆ ಹರಡುವಂತಾಗಿರುವುದು ಖುಷಿ ತಂದಿದೆ ಎಂದರು.

ಇದನ್ನೂ ಓದಿ:ತೆಲುಗು, ತಮಿಳಲ್ಲೂ ಕನ್ನಡದ ಕಂಪು.. ನೆರೆರಾಜ್ಯಗಳಲ್ಲಿ ಕಾಂತಾರ ಸೂಪರ್ ಹಿಟ್

ಮೈಮ್ ರಾಮ್ ದಾಸ್ ಕರಾವಳಿಯ ಹಿರಿಯ ಪ್ರತಿಭೆ. ತುಳು, ಕನ್ನಡ ಸಿನಿಮಾಗಳಲ್ಲಿನ ಪಾತ್ರಗಳಿಗೆ ಜೀವ ತುಂಬುವ ಜೊತೆಗೆ ತನ್ನ ಸುಮಧುರ ಕಂಠದಿಂದ ಜನರ ಮೆಚ್ಚುಗೆ ಪಾತ್ರರಾದವರು. ಸಿನಿಮಾ, ರಂಗ ಕಲಾವಿದನ ಜೊತೆಗೆ ಪತ್ರಕರ್ತನಾಗಿ, ಹೋಟೆಲ್ ವ್ಯವಹಾರದಲ್ಲಿ ಯಶಸ್ಸು ಕಂಡವರು. ಇವರ 16 ವರ್ಷಗಳ ಹಿಂದಿನ ಹಾಡು ಇಂದಿಗೂ ಪ್ರಸ್ತುತವಾಗಿರುವುದು, ಕಾಂತಾರ ಸಿನಿಮಾದಲ್ಲಿ ಬಳಕೆಯಾಗಿರುವುದು ಶ್ಲಾಘನೆಗೆ ಪಾತ್ರವಾಗಿದೆ.

ABOUT THE AUTHOR

...view details