ಜಾಗತಿಕ ಮಟ್ಟದಲ್ಲಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ 'ಕಾಂತಾರ' ಯಶಸ್ವಿಯಾಗಿದೆ. ದೇಶದಾದ್ಯಂತ ಸೆ.30 ರಂದು ತೆರೆಕಂಡಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಇಂದಿಗೂ ಧೂಳೆಬ್ಬಿಸುತ್ತಲೇ ಇದೆ. ಮೊದಲು ಕನ್ನಡದಲ್ಲಿ ಪ್ರದರ್ಶನ ಕಂಡ ಚಿತ್ರ ಬಳಿಕ ಕೇವಲ 15-20 ದಿನಗಳಲ್ಲಿ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಅಂದರೆ ದೇಶಾದ್ಯಂತ ಡಬ್ ಆಗಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಅದರಂತೆ ಇದೀಗ ಕಾಂತಾರ ಹಿಂದಿ ಅವತರಣಿಕೆ ಸಿನಿಮಾ ಶತದಿನ ಪೂರೈಸಿದೆ.
ಈ ಕುರಿತು ನಟ ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. "ಹಿಂದಿಯಲ್ಲಿ ಕಾಂತಾರ 100 ದಿನಗಳನ್ನು ಪೂರೈಸಿದೆ ಎನ್ನಲು ನಾವು ಸಂಭ್ರಮಿಸುತ್ತೇವೆ. ನಮ್ಮ ಚಿತ್ರವನ್ನು ಪ್ರೋತ್ಸಾಹಿಸಿ ಬೆಂಬಲಿಸಿದ ಪ್ರೇಕ್ಷಕರಿಗೆ ವಿನಯಪೂರ್ವಕ ಕೃತಜ್ಞತೆಗಳು" ಎಂದಿದ್ದಾರೆ. ಇತ್ತೀಚೆಗೆ ದೈವಕ್ಕೆ ಹರಕೆ ತೀರಿಸಿದ ಸಿನಿಮಾ ತಂಡದ ವಿಡಿಯೋ ಕೂಡ ಗಮನ ಸೆಳೆದಿತ್ತು. ಇದರ ನಂತರ ಕಾಂತಾರ-2 ಚಿತ್ರದ ವಿಷಯವೂ ಮುನ್ನೆಲೆಗೆ ಬಂದಿದ್ದು, ಚಿತ್ರತಂಡದ ಪ್ರತಿ ನಡೆಯನ್ನೂ ಜನರು ಕುತೂಹಲದಿಂದ ಗಮನಿಸುತ್ತಿದ್ದಾರೆ.
ಕಾಂತಾರ 2ಗೆ ದೈವದ ಅಭಯ?: ಕಾಂತಾರ 2 ಸಿನಿಮಾ ನಿರ್ಮಾಣವಾಗಲಿದೆಯಾ? ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಬಗ್ಗೆ ಅಧಿಕೃತ ಘೋಷಣೆ ಇಲ್ಲದಿದ್ದರೂ ಕಾಂತಾರ 2 ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಕಾಂತಾರ ಯಶಸ್ಸಿನ ಉತ್ತುಂಗದಲ್ಲಿರುವ ನಟ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಪಕ ವಿಜಯ್ ಕಿರಂಗದೂರ್ ಪಂಜುರ್ಲಿ ಕೋಲ ಕೊಟ್ಟು ಹರಕೆ ತೀರಿಸಿದ್ದಾರೆ. ಈ ಸಮಯದಲ್ಲಿ ಕಾಂತಾರ 2 ಮಾಡುವ ಬಗ್ಗೆ ಚಿತ್ರತಂಡ ದೈವದ ಬಳಿ ಕೇಳಿದೆ. ಇದಕ್ಕೆ ದೈವವು ಕೂಡ ಆಶೀರ್ವಾದ ನೀಡಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.