ಬಾಲಿವುಡ್ ನಟರಾದ ಅಜಯ್ ದೇವಗನ್, ಅಕ್ಷಯ್ ಖನ್ನಾ ಮತ್ತು ಟಬು ಮತ್ತು ಸೌತ್ ಸುಂದರಿ ಶ್ರಿಯಾ ಶರಣ್ ಅಭಿನಯದ ದೃಶ್ಯಂ 2 ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ನಿನ್ನೆ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿತ್ತು.
ನವೆಂಬರ್ 18ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಅಭಿಷೇಕ್ ಪಾಠಕ್ ನಿರ್ದೇಶಿಸಿದ್ದಾರೆ. ಚಿತ್ರವು ಮೂಲತಃ 2015ರಲ್ಲಿ ತೆರೆಕಂಡ ಮಲಯಾಳಂನ ಕ್ರೈಂ ಥ್ರಿಲ್ಲರ್ ಆಗಿದೆ. ಇದು ದೃಶ್ಯಂ ಒಂದರ ಮುಂದುವರಿದ ಭಾಗ. ಮಲಯಾಳಂನ ಜನಪ್ರಿಯ ನಟ ಮೋಹನ್‌ಲಾಲ್ ಅಭಿನಯದಲ್ಲಿ ಮೊದಲ ಬಾರಿಗೆ ಈ ಸಿನಿಮಾ ಚಿತ್ರ ನಿರ್ಮಾಣವಾಗಿತ್ತು. ನಂತರ ತೆಲುಗು, ಕನ್ನಡ, ಹಿಂದಿಯಲ್ಲಿ ರಿಮೇಕ್ ಮಾಡಲಾಗಿದೆ. ಆದರೆ, ಮಲಯಾಳಂನಲ್ಲಿದ್ದ ಹೆಸರನ್ನೇ ಎಲ್ಲ ಭಾಷೆಗಳಲ್ಲೂ ಇಡಲಾಗಿದೆ.
ದೃಶ್ಯಂ 2 ಚಿತ್ರವನ್ನು ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್, ಕ್ರಿಶನ್ ಕುಮಾರ್ ನಿರ್ಮಿಸಿದ್ದು, ಸಂಜೀವ್ ಜೋಶಿ, ಆದಿತ್ಯ ಚೌಕ್ಸೆ ಮತ್ತು ಶಿವ ಚನಾನ ಸಹ ನಿರ್ಮಾಣ ಮಾಡಿದ್ದಾರೆ. ವಯಾಕಾಮ್ 18 ಸ್ಟುಡಿಯೋಸ್, ಟಿ - ಸೀರಿಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸಲಿವೆ. ಹಿಂದಿ ಭಾಷೆಯ ದೃಶ್ಯಂ ಮೊದಲ ಭಾಗವನ್ನು ನಿರ್ಮಾಪಕ ದಿವಂಗತ ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದರು.