ಆರ್ಆರ್ಆರ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ರಾಜಮೌಳಿ ಅವರ 2005ರ ತೆಲುಗು ಬ್ಲಾಕ್ ಬಸ್ಟರ್ 'ಛತ್ರಪತಿ' ಸಿನಿಮಾದ ಅಧಿಕೃತ ಹಿಂದಿ ರೀಮೇಕ್ ಬಿಡುಗಡೆಗೆ ಮುಹೂರ್ತ ನಿಗದಿ ಆಗಿದೆ. ಇದು ತೆಲುಗು ನಟ ಶ್ರೀನಿವಾಸ್ ಬೆಲ್ಲಂಕೊಂಡ ಅವರ ಪ್ರಮುಖ ಬಾಲಿವುಡ್ ಚೊಚ್ಚಲ ಚಿತ್ರ. 'ಛತ್ರಪತಿ' ಸಿನಿಮಾ ಮೇ 12ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಚಿತ್ರತಂಡ ಇಂದು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಲ್ಲದೇ, ಚಿತ್ರದ ಟೀಸರ್ ಅನ್ನೂ ಬಿಡುಗಡೆ ಮಾಡಿದೆ.
ಯೂಟ್ಯೂಬ್‌ನಲ್ಲಿ 'ಛತ್ರಪತಿ' ಹಿಂದಿ ಆವೃತ್ತಿಯ ಟೀಸರ್ ಬಿಡುಗಡೆ ಆದ ಕೂಡಲೇ ನಟ ಶ್ರೀನಿವಾಸ್ ಬೆಲ್ಲಂಕೊಂಡ ಅವರ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಟೀಸರ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅಭಿಮಾನಿಗಳ ಪರವಾಗಿ ನಾವು ಈ ಚಿತ್ರ ಬ್ಲಾಕ್ ಬಸ್ಟರ್ ಆಗಬೇಕೆಂದು ಬಯಸುತ್ತೇವೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಬಾಲಿವುಡ್ ಜನರು ಥಿಯೇಟರ್‌ನಲ್ಲಿ ಈ ಮಾಸ್ಟರ್‌ಪೀಸ್ ಅನ್ನು ಪ್ರೋತ್ಸಾಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಉಳಿದಂತೆ ಅಭಿಮಾನಿಗಳು ಫೈಯರ್, ಹಾರ್ಟ್ ಎಮೋಜಿ ಮೂಲಕ ತಮ್ಮ ಮೆಚ್ಚಿನ ನಟನ ಸಿನಿಮಾಗೆ ಪ್ರೋತ್ಸಾಹಿಸುತ್ತಿದ್ದಾರೆ.
ಛತ್ರಪತಿ ಪ್ರಾಜೆಕ್ಟ್ ಕುರಿತು ನಟ ಬೆಲ್ಲಂಕೊಂಡ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. 'ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ನಾನು ವಿಶೇಷ ಚಲನಚಿತ್ರ, ರೋಮಾಂಚಕ ಮತ್ತು ಮನರಂಜನೆಯ ಮಾಸ್ ಆಕ್ಷನ್ ಕಾಮಿಡಿ ಸಿನಿಮಾ ಛತ್ರಪತಿಯೊಂದಿಗೆ ಉತ್ಸುಕನಾಗಿದ್ದೇನೆ. ಈ ಚಿತ್ರವನ್ನು ಭಾರತದಾದ್ಯಂತ ಪ್ರೇಕ್ಷಕರಿಗೆ ತಲುಪಿಸಲು ನಾವು ಸಂತೋಷಪಡುತ್ತೇವೆ. ಏಕೆಂದರೆ ಸಿನಿಮಾ ಮಾಡಿದ ಪ್ರತಿಯೊಂದು ಕ್ಷಣವೂ ರೋಮಾಂಚನಕಾರಿ ಮತ್ತು ಕಷ್ಟಕರವಾಗಿತ್ತು ಎಂದು ತಿಳಿಸಿದ್ದಾರೆ.
ಆಸ್ಕರ್ ವಿಜೇತ ಆರ್ಆರ್ಆರ್, ಬಾಹುಬಲಿ ಅಂತಹ ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ತಂದೆ, ಹಿರಿಯ ಬರಹಗಾರ ವಿ. ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆಯನ್ನು ಬರೆದಿದ್ದಾರೆ. ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಪೆನ್ ಸ್ಟುಡಿಯೋಸ್ನ ಜಯಂತಿಲಾಲ್ ಗಡ ಮತ್ತು ನಿರ್ದೇಶಕ ವಿ.ವಿ. ವಿನಾಯಕ್ ಈ ಬಿಗ್-ಬಜೆಟ್ ಆ್ಯಕ್ಷನ್ ಕಾಮಿಡಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.