ಬಹುನಿರೀಕ್ಷಿತ ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತದಿಂದ ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡು ಮತ್ತು ಎರಡು ಸಾಕ್ಷ್ಯಚಿತ್ರಗಳು ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದು, ಮೂರು ವಿಭಾಗಗಳಲ್ಲೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ. ಅಲ್ಲದೇ ಅಕಾಡೆಮಿ ವೇದಿಕೆಯಲ್ಲಿ ನಾಟು ನಾಟು ಹಾಡಿನ ಜೊತೆಗೆ ನೃತ್ಯ ಪ್ರದರ್ಶನ ಕೂಡ ಇರಲಿದೆ. ಆದರೆ ಈ ಹಾಡಿಗೆ ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಪ್ರದರ್ಶನ ನೀಡುತ್ತಿಲ್ಲ.
ಹೌದು. ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ವತಃ ಜೂನಿಯರ್ ಎನ್ಟಿಆರ್ ಅವರೇ ಸ್ಪಷ್ಟಪಡಿಸಿದ್ದರು. "ನಾವು ನಮ್ಮ ಹಾಡಿಗೆ ಡ್ಯಾನ್ಸ್ ಮಾಡುತ್ತೇವೆ ಎಂದು ಖಚಿತವಾಗಿ ಹೇಳಲಾರೆವು. ರಾಮ್ಚರಣ್ ಮತ್ತು ನನಗೆ ರಿಹರ್ಸಲ್ ಮಾಡಲು ಸಮಯದ ಅಭಾವವಿದೆ. ಹೀಗಾಗಿ ನಾವು ಆಸ್ಕರ್ ವೇದಿಕೆಯಲ್ಲಿ ನೃತ್ಯ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದರು. ಹೀಗಿದ್ದರೂ ಸಹ ಅಕಾಡೆಮಿ ವೇದಿಕೆಯಲ್ಲಿ ನಾಟು ನಾಟು ಹಾಡಿನ ನೃತ್ಯ ಪ್ರದರ್ಶನ ಇರಲಿದೆ. ಆಸ್ಕರ್ ನಾಮನಿರ್ದೇಶನಗೊಂಡ ನಾಟು ನಾಟು ಹಾಡನ್ನು ಅಮೆರಿಕನ್ ನರ್ತಕಿ ಲಾರೆನ್ ಗಾಟ್ಲೀಬ್ ಅವರು ಮಾರ್ಚ್ 12 ರಂದು ಅಕಾಡೆಮಿ ವೇದಿಕೆಯಲ್ಲಿ ಪ್ರದರ್ಶಿಸಲಿದ್ದಾರೆ.
ಜಲಕ್ ದಿಕ್ಲಾ ಜಾ ಆರನೇ ಸೀಸನ್ ರನ್ನರ್ ಅಪ್ ಆಗಿರುವ ಲಾರೆನ್ ಗಾಟ್ಲೀಬ್ ಈ ಹಿಂದೆ ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡುವುದಾಗಿ ಹೇಳಿದ್ದರು. ಅದರಂತೆ ಲಾರೆನ್ ತಮ್ಮ ತಂಡದೊಂದಿಗೆ ನೃತ್ಯಾಭ್ಯಾಸ ಮಾಡುತ್ತಿದ್ದು, ಈ ವಿಡಿಯೋ ತುಣುಕನ್ನು ಜೂನಿಯರ್ ಎನ್ಟಿಆರ್ ಅಭಿಮಾನಿಗಳು ತಮ್ಮ ಟ್ವಿಟರ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. 'ನಾಟು ನಾಟು ಆಸ್ಕರ್ 2023ರ ಹೈಲೈಟ್' ಎಂಬುದಾಗಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಲಾರೆನ್ ಗಾಟ್ಲೀಬ್ ತಮ್ಮ ತಂಡದೊಂದಿಗೆ ಡ್ಯಾನ್ಸ್ ಮಾಡುತ್ತಿರುವುದು ಕಾಣಬಹುದು.