ಟಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆಯ ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ನ್ಯಾಚುರಲ್ ಸ್ಟಾರ್ ನಾನಿ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಹಾಯ್ ನಾನ್ನ'. 'ದಸರಾ' ಬ್ಲಾಕ್ಬಸ್ಟರ್ ಆದ ಬಳಿಕ ನಾನಿ ನಟಿಸುತ್ತಿರುವ 30ನೇ ಸಿನಿಮಾವಿದು. ಇದೀಗ ಚಿತ್ರತಂಡ 'ಹಾಯ್ ನಾನ್ನ' ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. 'ಹಾಯ್ ನಾನ್ನ' ಎಂಬುದು ತೆಲುಗು ಪದವಾಗಿದ್ದು, 'ಹಾಯ್ ಅಪ್ಪ' ಎಂಬ ಅರ್ಥ ನೀಡುತ್ತದೆ.
ಎಮೋಶನಲ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ ಮತ್ತು ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ. ತಂದೆ ಪಾತ್ರದಲ್ಲಿ ನಾನಿ ಹಾಗೂ ಮಗಳ ಪಾತ್ರದಲ್ಲಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ. ನಾನಿಗೆ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಂಡಿದ್ದಾರೆ. ಫೀಲ್ ಗುಡ್ ಲವ್ ಸ್ಟೋರಿ ಜೊತೆಗೆ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ ಎನ್ನುತ್ತಿದ್ದಾರೆ ಟೀಸರ್ ವೀಕ್ಷಿಸಿದ ನೆಟ್ಟಿಗರು.
ಟೀಸರ್ ಬಿಡುಗಡೆಯಾದ ಮೂರು ಗಂಟೆಯೊಳಗೆ 8.6 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಇದರಲ್ಲಿ ನಾನಿಗೆ, ಮೃಣಾಲ್ 'ಹಾಯ್ ನಾನ್ನ' ಎನ್ನುವುದು ಆಕರ್ಷಕವಾಗಿದೆ. ಈ ಮೂಲಕ ಮೂವರ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಸಿನಿಮಾದಲ್ಲಿ ಮಹತ್ವದ ತಿರುವು ಸಿಗಲಿದೆ ಎಂಬುದು ಬಿಡುಗಡೆಯಾಗಿರುವ ಟೀಸರ್ನಲ್ಲಿ ಗೊತ್ತಾಗಿದೆ. ಕಥೆ ಪೂರ್ಣ ತಿಳಿಯಬೇಕೆಂದರೆ ಸಿನಿಮಾ ಬಿಡುಗಡೆಯವರೆಗೂ ಕಾಯಲೇಬೇಕು. ಇದಕ್ಕೂ ಮುನ್ನ ರಿಲೀಸ್ ಆಗಿದ್ದ 'ವಿವರಣೆ ಬೇಕಿಲ್ಲ' ಮತ್ತು 'ಮಗಳಲ್ಲ ನೀ ನನ್ನ ಅಮ್ಮ' ಹಾಡುಗಳು ಪ್ರೇಕ್ಷಕರನ್ನು ಮನಸೂರೆಗೊಳ್ಳುತ್ತಿವೆ.