ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ವಿಭಿನ್ನ ಪಾತ್ರ, ಚಿತ್ರಗಳ ಮೂಲಕ ತಮ್ಮದೇ ಆದ ಸ್ಟಾರ್ ಡಮ್ ಕ್ರಿಯೇಟ್ ಮಾಡಿಕೊಂಡಿರುವ ನಟ ನಾನಿ. 'ದಸರಾ' ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ಅಭಿನಯಿಸಿರುವ ಸಿನಿಮಾ 'ಹಾಯ್ ನಾನ್ನ'. ಇದು ನಟನ 30ನೇ ಸಿನಿಮಾ. ಟ್ರೇಲರ್, ಹಾಡಿನ ಮೂಲಕ ನಿಪ್ರಿಯರಲ್ಲಿ ಕುತೂಹಲ ಮೂಡಿಸಿರೋ 'ಹಾಯ್ ನಾನ್ನ' ಇದೇ ಡಿಸೆಂಬರ್ 7ರಂದು ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಪ್ರಚಾರದ ಭಾಗವಾಗಿ ನಾನಿ ಬೆಂಗಳೂರಿಗೆ ಆಗಮಿಸಿದ್ದರು.
ಬೆಂಗಳೂರಿನಲ್ಲಿ 'ಹಾಯ್ ನಾನ್ನ' ಪ್ರಚಾರ: 'ಹಾಯ್ ನಾನ್ನ' ಚಿತ್ರದ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಯಿತು. ಈ ಸಂದರ್ಭ ನಟ ನಾನಿ, ಕರ್ನಾಟದಲ್ಲಿ ಈ ಚಿತ್ರದ ವಿತರಣಾ ಜವಾಬ್ದಾರಿಯನ್ನು ಹೊತ್ತಿರುವ ನಿರ್ಮಾಪಕ, ವಿತರಕ ಜಾಕ್ ಮಂಜು ಉಪಸ್ಥಿತರಿದ್ದರು.
ಮೊದಲು ಮಾತನಾಡಿದ ಜಾಕ್ ಮಂಜು, ಹಾಯ್ ನಾನ್ನ ಚಿತ್ರವನ್ನು ಕನ್ನಡ ಹಾಗೂ ತೆಲುಗು ಭಾಷೆ ಸೇರಿ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ಡಬ್ಬಿಂಗ್ ಕೂಡ 35 ರಿಂದ 40ಕ್ಕೂ ಹೆಚ್ಚು ಥಿಯೇಟರ್ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ತಂದೆ ಮಗಳ ಬಾಂಧವ್ಯ: ಬಳಿಕ ಮಾತನಾಡಿದ ನಟ ನಾನಿ, ಬೆಂಗಳೂರು ಅಂದ್ರೆ ಬಹಳ ಇಷ್ಟ. ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುವ ಜನರಿದ್ದಾರೆ. ನನ್ನ ಹೆಚ್ಚಿನ ಸ್ನೇಹಿತರು ಇರೋದು ಬೆಂಗಳೂರಿನಲ್ಲೇ ಎಂದು ತಿಳಿಸಿದರು. ಸಿನಿಮಾ ಬಗ್ಗೆ ಮಾತು ಮುಂದುವರಿಸಿ, ಇದೊಂದು ಯೂನಿವರ್ಸಲ್ ಕಥೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಎಮೋಷನಲ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡಿದೆ. ತಂದೆ ಮಗಳ ಬಾಂಧವ್ಯದ ಸುತ್ತ ಕಥೆ ಹೆಣೆಯಲಾಗಿದೆ. ವಿಭಿನ್ನ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಮಗಳ ಪಾತ್ರದಲ್ಲಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾಳೆ. ಜೊತೆಗೆ ಸೀತಾ ರಾಮಂ ಖ್ಯಾತಿಯ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನಿಜಕ್ಕೂ ನೋಡುಗರನ್ನು ಭಾವನಾತ್ಮಕ ಜಗತ್ತಿಗೆ ಕರೆದೊಯ್ಯುತ್ತದೆ ಎಂದು ತಿಳಿಸಿದರು.
ನಮ್ಮ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಾನ್ನ ಅಂದ್ರೆ ಅಪ್ಪ. ಆದರೆ ಹಿಂದಿಯಲ್ಲಿ ಹಾಯ್ ಪಾಪ ಎಂದು ಶೀರ್ಷಿಕೆ ಇಟ್ಟಿದ್ದೇವೆ. ಹಿಂದಿಯಲ್ಲಿ ನಾನ್ನ ಅಂದ್ರೆ ತಾತ ಆಗುತ್ತೆ. ಹಾಗಾಗಿ ಪಾಪ ಎಂದು ಇಟ್ಟಿದ್ದೇವೆಂದು ತಿಳಿಸಿದರು. ಇನ್ನು, ಹಾಯ್ ನಾನ್ನ ನನಗೆ ಬಹಳ ಹತ್ತಿರವಾದ ಚಿತ್ರ. ನನಗೆ 6 ವರ್ಷದ ಮಗನಿದ್ದಾನೆ. ಈ ಚಿತ್ರದಲ್ಲಿ ಹೆಣ್ಣು ಮಗುವಿನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನನಗೆ ತೃಪ್ತಿ ಕೊಟ್ಟಿದೆ. ಈ ಚಿತ್ರ ಯಾರಿಗೂ ನಿರಾಶೆ ಮಾಡಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.