ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ದೇಶಕ ನಿತೇಶ್ ತಿವಾರಿ ಅವರ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್ 'ರಾಮಾಯಣ'. ಮಹಾಕಾವ್ಯ ರಾಮಾಯಣ ಆಧರಿಸಿ ಈಗಾಗಲೇ ಕೆಲ ಧಾರಾವಾಹಿ, ಚಲನಚಿತ್ರಗಳು ಮೂಡಿ ಬಂದಿವೆ. ಇದೀಗ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ.
ಮುಂದಿನ ವರ್ಷ ಅಂದರೆ 2024ರ ಫೆಬ್ರವರಿಯಲ್ಲಿ ನಿತೇಶ್ ತಿವಾರಿ ಅವರು 'ರಾಮಾಯಣ'ದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ವರದಿಗಳ ಪ್ರಕಾರ, ರಾಮಾಯಣದಲ್ಲಿ ಬಾಲಿವುಡ್ ಸ್ಟಾರ್ ಹೀರೋ ರಣ್ಬೀರ್ ಕಪೂರ್ ರಾಮನಾಗಿ, ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸಲಿದ್ದು, ಕೆಜಿಎಫ್ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಾಮಾಯಣದ ಮೂವರು ಪ್ರಮುಖ ನಟರು ಚಿತ್ರಕ್ಕಾಗಿ ಈಗಾಗಲೇ ತಮ್ಮ ಲುಕ್ ಟೆಸ್ಟ್ಗೂ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ 2024ರ ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಆಗಸ್ಟ್ ವರೆಗೆ ಶೂಟಿಂಗ್ ನಡೆಯಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಚಿತ್ರತಂಡಕ್ಕೆ ರಾವಣನಾಗಿ ಯಶ್ ಪ್ರವೇಶಿಸುತ್ತಿರುವುದು ಸಿನಿಮಾ ಸುತ್ತಲಿನ ಕುತೂಹಲವನ್ನು ಹೆಚ್ಚಿಸಿದೆ. ಕೆಜಿಎಫ್ ಮೂಲಕ ವಿಶ್ವದಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಕುರಿತು ಬೆಟ್ಟದಷ್ಟು ನಿರೀಕ್ಷೆಗಳಿದ್ದು, ಅಧಿಕೃತ ಘೋಷಣೆಗೆ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ದಂಗಲ್ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ 'ರಾಮಾಯಣ'ವನ್ನು ಎರಡು ಭಾಗಗಳಲ್ಲಿ ತರಲಿದ್ದಾರೆನ್ನುವ ಮಾಹಿತಿ ಇದೆ. ನಿರೀಕ್ಷೆಯಂತೆ, ಮೊದಲ ಭಾಗ ರಾಮ ಮತ್ತು ಸೀತೆ ಕಥೆ ಮೇಲೆ ಕೇಂದ್ರೀಕೃತವಾಗಲಿದೆ. ಯಶ್ ರಾವಣನಾಗಿ ಎಂಟ್ರಿ ಕೊಡಲಿದ್ದಾರೆ. ಬಳಿಕ ಯಶ್ ಪಾತ್ರಕ್ಕೆ ಹೆಚ್ಚು ಒತ್ತು ಕೊಡಲಾಗುವುದು.