'ಹೇರಾ ಫೇರಿ' ಬಾಲಿವುಡ್ನ ಜನಪ್ರಿಯ ಚಿತ್ರಗಳಲ್ಲಿ ಒಂದು. 'ಹೇರಾ ಫೆರಿ'ಯ ಮೂರನೇ ಭಾಗಕ್ಕೆ ಕಾರ್ತಿಕ್ ಆರ್ಯನ್ ಸೇರಲಿದ್ದಾರೆ ಎಂಬ ವಿಷಯ ಘೋಷಿಸಿದ ನಂತರ ಸೂಪರ್ಹಿಟ್ ಚಿತ್ರದ ಅಭಿಮಾನಿಗಳು ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಹಿರಿಯ ನಟ ಪರೇಶ್ ರಾವಲ್, ಕಾರ್ತಿಕ್ ಆರ್ಯನ್ 'ಹೇರಾ ಫೇರಿ' ತಾರಾಗಣಕ್ಕೆ ಹೊಸ ಸೇರ್ಪಡೆ ಎಂದು ಖಚಿತಪಡಿಸಿದ್ದಾರೆ.
ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಪರೇಶ್ ರಾವಲ್ ಅವರನ್ನು ಟ್ಯಾಗ್ ಮಾಡುವ ಮೂಲಕ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಪರೇಶ್ ರಾವಲ್ ಸರ್, ಕಾರ್ತಿಕ್ ಆರ್ಯನ್ ಹೇರಾ ಫೇರಿ 3 ಮಾಡುತ್ತಿರುವುದು ನಿಜವೇ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪರೇಶ್ ಟ್ವೀಟ್ ಮಾಡಿ, ಹೌದು ಇದು ನಿಜ ಎಂದು ಪ್ರತಿಕ್ರಿಯಿಸಿದ್ದಾರೆ.
ನಂತರ ಹೇರಾ ಫೇರಿ ಚಿತ್ರದ ಮೊದಲೆರಡು ಭಾಗಗಳಲ್ಲಿ ನಟಿಸಿರುವ ಅಕ್ಷಯ್ ಕುಮಾರ್ ಅವರ ಅಭಿಮಾನಿಗಳು ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪ್ರಿಯದರ್ಶನ್ ನಿರ್ದೇಶನದ 'ಹೇರಾ ಫೇರಿ' 2000ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2006ರಲ್ಲಿ ಬಂದ ಎರಡನೇ ಭಾಗವನ್ನು ದಿವಂಗತ ನೀರಜ್ ವೋರಾ ನಿರ್ದೇಶಿಸಿದ್ದು, ಇದರಲ್ಲಿ ಅಕ್ಷಯ್ ಕುಮಾರ್, ಪರೇಶ್ ರಾವಲ್, ಸುನೀಲ್ ಶೆಟ್ಟಿ, ಬಿಪಾಶಾ ಬಸು, ರಾಜ್‌ಪಾಲ್ ಯಾದವ್ ಮತ್ತು ರಿಮಿ ಸೇನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮೂನೇ ಭಾಗಕ್ಕೆ ಕಾರ್ತಿಕ್ ಆರ್ಯನ್ ಹೊಸ ಸೇರ್ಪಡೆ.