ಮುಂಬೈ: ಬಾಲಿವುಡ್ನ ಡ್ರೀಮ್ ಗರ್ಲ್, ಬಸಂತಿ ಎಂದೇ ಜನಮಾನಸದಲ್ಲಿ ಪರಿಚಿತರಾಗಿರುವ ನಟಿ ಹೇಮಾ ಮಾಲಿನಿಗೆ ಇಂದು 75ನೇ ಹುಟ್ಟುಹಬ್ಬದ ಸಂಭ್ರಮ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ ರಾಜಕೀಯದಲ್ಲೂ ಛಾಪು ಮೂಡಿಸಿರುವ ಈ ನಟಿ ಇಂದಿಗೂ ತಮ್ಮ ಎವರ್ಗ್ರೀನ್ ಪಾತ್ರಗಳ ಅಭಿನಯದ ಮೂಲಕ ಜನರ ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದ್ದಾರೆ. ಪ್ರತಿಭಾವಂತ ನಟಿಯಾಗಿರುವ ಈಕೆ ಕೇವಲ ಬಾಲಿವುಡ್ ಮಾತ್ರವಲ್ಲದೇ, ದಕ್ಷಿಣ ಭಾರತದ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
1948 ಅಕ್ಟೋಬರ್ 16ರಂದು ತಮಿಳು ಅಯ್ಯಂಗಾರ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು ನಟಿ ಹೇಮಾಮಾಲಿನಿ. ದಕ್ಷಿಣ ಭಾರತದ ಸಿನಿಮಾ ಉದ್ಯಮದಲ್ಲಿ ತಮ್ಮ ಚಿತ್ರರಂಗದ ಪ್ರಯಾಣವನ್ನು ಆರಂಭಿಸಿದರು. ರಾಜ್ ಕಪೂರ್ ಅವರ ಜೊತೆಯಾಗಿ ನಟಿಸಿದ ಬಳಿಕ ಅವರು, ಬಾಲಿವುಡ್ನಲ್ಲಿ ಪ್ರಖ್ಯಾತಿ ಪಡೆದು, ಹಿಂದಿ ಪ್ರೇಕ್ಷಕರ ಮನದಲ್ಲಿ ಕನಸಿನ ರಾಣಿಯಾಗಿ ಮೆರೆದರು. ಸೌಂದರ್ಯ ಮತ್ತು ಅಭಿನಯದ ಮೂಲಕ ತಮ್ಮದೇ ಆದ ಕೆಲವು ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದರು.
ಸೀತಾ ಔರ್ ಗೀತಾ (1972): ಸೀತಾ ಮತ್ತು ಗೀತಾ ಎಂಬ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ ಹೇಮಮಾಲಿನಿ ಅಭಿಯನಕ್ಕೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಯಿತು. ಈ ಚಿತ್ರದ ಮೂಲಕ ನಟಿ ಉತ್ತಮ ಕಲಾವಿದೆ ಎಂಬುದನ್ನು ನಿರೂಪಿಸಿದರು.
ಬಸಂತಿ (ಶೋಲೆ, 1975): ಹಿಂದಿ ಚಿತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಪಾತ್ರಗಳಲ್ಲಿ ಬಸಂತಿ ಪಾತ್ರವೂ ಒಂದು. ಇಂದಿಗೂ ಅನೇಕ ನಟಿಯರು ಇಂತಹ ಪಾತ್ರವನ್ನು ನಿರ್ವಹಿಸಬೇಕು ಎಂಬ ಕನಸನ್ನು ಹೊಂದಿದ್ದಾರೆ. ಈ ಚಿತ್ರದಲ್ಲಿ ತಮ್ಮ ಅದ್ಬುತ ಡೈಲಾಗ್ ಮತ್ತು ಮಾತುಗಾರಿಕೆ ಮೂಲಕ ನಟಿ ಪ್ರಸಿದ್ಧಿ ಪಡೆದರು.