ಭರ್ಜರಿ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್. ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಡಾನ್ ಎಂ.ಪಿ ಜಯರಾಜ್ ಅವರ ಜೀವನಾಧಾರಿತ ಸಿನಿಮಾ ಮಾಡುತ್ತಿರುವುದು ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿದೆ. ಚಿತ್ರೀಕರಣ ಮುಗಿದಿರುವ ಹೆಡ್ ಬುಷ್ ಸಿನಿಮಾವನ್ನು ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದೆಂದು ಚಿತ್ರತಂಡ ತಿಳಿಸಿದೆ.
ಈಗಾಗಲೇ ಡಾಲಿ ಧನಂಜಯ್ ಎಂ.ಪಿ ಜಯರಾಜ್ ಸ್ಟೈಲ್ನಲ್ಲಿ ಸಿಗರೇಟ್ ಸೇದುವ ಪೋಸ್ಟರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ. ಬರಹಗಾರ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ. 1970ರ ಬೆಂಗಳೂರಿನ ಭೂಗತ ಜಗತ್ತನ್ನು ಶೂನ್ಯ ಅವರು ಈ ಚಿತ್ರದಲ್ಲಿ ತೋರಿಸಲಿದ್ದಾರೆ. ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಎನ್. ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.