ಅದ್ಭುತ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್. ನಟ ರಾಕ್ಷಸ ಅಂತಾ ಕರೆಸಿಕೊಳ್ಳುವ ಡಾಲಿ ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಡಾನ್ ಎಂ ಪಿ ಜಯರಾಜ್ ಅವರ ಜೀವನಾಧಾರಿತ ಸಿನಿಮಾ ಮಾಡುತ್ತಿರುವುದು ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿದೆ. ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಹೆಡ್ ಬುಷ್ ಸಿನಿಮಾ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆ.
ಡಾಲಿ ಧನಂಜಯ್ ಮಾಜಿ ಡಾನ್ ಜಯರಾಜ್ ಬಯೋಫಿಕ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹು ನಿರೀಕ್ಷಿತ ಸಿನಿಮಾ ಹೆಡ್ ಬುಷ್. ಸದ್ಯ ಪೋಸ್ಟರ್ ಹಾಗು ಹಾಡುಗಳಿಂದಲೇ ಸೌಂಡ್ ಮಾಡುತ್ತಿರುವ ಹೆಡ್ ಬುಷ್ ಸಿನಿಮಾ ಗಾಂಧಿನಗರದಿಂದ ದುಬೈವರೆಗೂ ಸದ್ದು ಮಾಡುತ್ತಿದೆ. ರಾಜ್ ಕಪ್ ಕ್ರಿಕೆಟ್ ಪಂದ್ಯಕ್ಕಾಗಿ ದುಬೈಗೆ ಹೋಗಿರುವ ಧನಂಜಯ್ ಅಲ್ಲೂ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರತಂಡದ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಹೆಡ್ ಬುಷ್ ಸಿನಿಮಾ ಡಿಜಿಟಲ್, ಸ್ಯಾಟಲೈಟ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ದಾಖಲೆಯ ಬೆಲೆಗೆ ಮಾರಾಟವಾಗಿದೆ ಅನ್ನೋ ಮಾಹಿತಿ ಇದೆ.
ಹೌದು, ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡುತ್ತಿರುವ ಹೆಡ್ ಬುಷ್ ಸಿನಿಮಾ ಬಿಡುಗಡೆಗೂ ಮುನ್ನವೇ ಒಳ್ಳೆ ಬಿಸ್ನೆಸ್ ಆಗಿದೆ. ಹೆಡ್ ಬುಷ್ ಚಿತ್ರತಂಡದ ಸದ್ಯದರೊಬ್ಬರು ಹೇಳುವ ಪ್ರಕಾರ, ಝೀ ಸ್ಟುಡಿಯೋಸ್ ಸಂಸ್ಥೆ ಬರೋಬ್ಬರಿ 20 ರಿಂದ 25 ಕೋಟಿಗೆ ಡಿಜಿಟಲ್, ಸ್ಯಾಟಲೈಟ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ಖರೀದಿಸಿದೆ ಎನ್ನಲಾಗ್ತಿದೆ.