ಭಾರತದ, ಅದ್ರಲ್ಲೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದ (ಟಾಲಿವುಡ್) ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್‌ಆರ್‌ಆರ್ ಸಿನಿಮಾವು ಚಿತ್ರರಂಗದಲ್ಲಿ ಯಶಸ್ಸಿನ ದಾಖಲೆ ಬರೆಯುತ್ತಲೇ ಇದೆ. ಈಗಾಗಲೇ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಚಿತ್ರ ಇತ್ತೀಚೆಗೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಪಿಲ್ಮ್ ಅವಾರ್ಡ್ನಲ್ಲಿ ಅತ್ಯುನ್ನತ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಜೂನಿಯರ್ ಎನ್ಟಿಆರ್ ಗೈರು: ಅಮೆರಿಕದಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (ಹೆಚ್‌ಸಿಎ) ಆಯೋಜಿಸಿದ್ದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ರಾಜಮೌಳಿ, ನಟ ರಾಮ್ ಚರಣ್ ಮತ್ತು ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಆರ್‌ಆರ್‌ಆರ್ ಚಿತ್ರ ತಂಡವನ್ನು ಪ್ರತಿನಿಧಿಸಿದ್ದರು. ಆದ್ರೆ ಸಮಾರಂಭಕ್ಕೆ ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಅನುಪಸ್ಥಿತಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಹೆಚ್‌ಸಿಎ ಟ್ವೀಟ್ ಏನು?:ಜೂನಿಯರ್ ಎನ್ಟಿಆರ್ ಕಾರ್ಯಕ್ರಮಕ್ಕೆ ಬಾರದಿರುವ ಬಗ್ಗೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ''ನಟ ಜೂನಿಯರ್ ಎನ್ಟಿಆರ್ ಭಾರತದಲ್ಲಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿರುವುದರಿಂದ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಸಮಾರಂಭಕ್ಕೆ ಸಾಕ್ಷಿಯಾಗಲು ನಾವು ಅವರನ್ನು ಆಹ್ವಾನಿಸಿದ್ದೇವೆ, ಆದರೆ ಅವರು ಹೊಸ ಚಿತ್ರದ ಚಿತ್ರೀಕರಣದಲ್ಲಿದ್ದಾರೆ, ಅವರು ಶೀಘ್ರದಲ್ಲೇ ನಮ್ಮಿಂದ ತಮ್ಮ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ತಿಳಿಸಿದೆ.
ಆರ್‌ಆರ್‌ಆರ್ ಹೆಚ್‌ಸಿಎ ಪ್ರಶಸ್ತಿ: ಇತ್ತೀಚೆಗೆ ಅಮೆರಿಕದಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಜೂ.ಎನ್ಟಿಆರ್ ಮತ್ತು ರಾಮ್ಚರಣ್ ನಟನೆಯ ಆರ್‌ಆರ್‌ಆರ್ ಸಿನಿಮಾ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ', 'ಅತ್ಯುತ್ತಮ ಆಕ್ಷನ್ ಚಿತ್ರ, 'ಅತ್ಯುತ್ತಮ ಹಾಡು', 'ಅತ್ಯುತ್ತಮ ಸ್ಟಂಟ್' ವಿಭಾಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.