ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿಯ ಆರ್ಆರ್ಆರ್ ಸಿನಿಮಾ ಚಿತ್ರರಂಗದಲ್ಲಿ ಯಶಸ್ಸಿನ ದಾಖಲೆ ಬರೆಯುತ್ತಿದೆ. ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್ಆರ್ಆರ್ ಇದೀಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಪಿಲ್ಮ್ ಅವಾರ್ಡ್ನಲ್ಲಿ ಅತ್ಯುನ್ನತ 4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಮೂಲಕ ಭಾರತೀಯ ಚಿತ್ರರಂಗಕ್ಕೆ ಹಾಗೂ ದೇಶಕ್ಕೆ ಆರ್ಆರ್ಆರ್ ಗೌರವ ಮತ್ತು ಕೀರ್ತಿಯನ್ನು ತಂದು ಕೊಟ್ಟಿದೆ.
ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಅಭಿನಯಿಸಿರುವ ಈ ಸಿನಿಮಾವು 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ', 'ಅತ್ಯುತ್ತಮ ಆಕ್ಷನ್ ಚಿತ್ರ, 'ಅತ್ಯುತ್ತಮ ಹಾಡು' ಮತ್ತು 'ಅತ್ಯುತ್ತಮ ಸ್ಟಂಟ್' ವಿಭಾಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ವಿಶೇಷ ಮಾನ್ಯತೆಯನ್ನು ಗಳಿಸಿಕೊಂಡಿದೆ. ತಂಡದ ಪರವಾಗಿ ಪ್ರಶಸ್ತಿಯನ್ನು ನಿರ್ದೇಶಕ ಎಸ್ಎಸ್ಎಸ್ ರಾಜಮೌಳಿ ಸಂಭ್ರಮದಿಂದ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, "ಆರ್ಆರ್ಆರ್ ಸಿನಿಮಾ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನನಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ" ಎಂದರು. ಮುಂದುವರಿದು, "ಸಿನಿಮಾವು ಅತ್ಯುತ್ತಮ ಸ್ಟಂಟ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯು ಸ್ಟಂಟ್ ಕೊರಿಯೋಗ್ರಾಫರ್ಗಳ ಪರಿಶ್ರಮಕ್ಕೆ ಸಂದಿದೆ. ತುಂಬಾ ಕಷ್ಟಪಟ್ಟು ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಈ ಪ್ರಶಸ್ತಿಗೆ ನಿಜವಾಗಿಯೂ ಅವರೇ ಅರ್ಹರು" ಎಂದು ಹೇಳಿದರು. ಬಳಿಕ ಮತ್ತೊಮ್ಮೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ಗೆ ಧನ್ಯವಾದಗಳನ್ನು ಅರ್ಪಿಸಿದರು.
ಇದನ್ನೂ ಓದಿ:ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ: ರಣಬೀರ್, ಆಲಿಯಾ ದಂಪತಿಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ