ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್‌ಆರ್‌ಆರ್ ಚಿತ್ರ ಇದೇ ಮಾರ್ಚ್ 24ಕ್ಕೆ ಒಂದು ವರ್ಷ ಪೂರೈಸಲಿದೆ. ಸೌತ್ ಸಿನಿರಂಗದ ಸೂಪರ್ ಹಿಟ್ ಮೂವಿ ಆರ್‌ಆರ್‌ಆರ್ ಈಗಾಗಲೇ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಸದ್ಯ ಎಲ್ಲರ ಗಮನ ಆಸ್ಕರ್ ಮೇಲೆ ಕೇಂದ್ರೀಕೃತವಾಗಿದೆ.
ಟಾಲಿವುಡ್ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ಚರಣ್ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಚಿತ್ರ ಪ್ರದರ್ಶನಗೊಂಡ ಪ್ರತೀ ದೇಶಗಳಲ್ಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಇತ್ತೀಚೆಗೆ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಪಿಲ್ಮ್ ಅವಾರ್ಡ್ಸ್ ಸಮಾರಂಭದಲ್ಲಿ ಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಮಾರಂಭದಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ನಟ ರಾಮ್ಚರಣ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಆದರೆ ಚಿತ್ರದ ಪ್ರಮುಖ ನಟರಲ್ಲೊಬ್ಬರಾದ ಜೂನಿಯರ್ ಎನ್‌ಟಿಆರ್ ಈ ಸಮಾರಂಭಕ್ಕೆ ಸಾಕ್ಷಿಯಾಗಿರಲಿಲ್ಲ.
ಸ್ಪಾಟ್‌ಲೈಟ್ ಪ್ರಶಸ್ತಿ:ಅಮೆರಿಕದಲ್ಲಿ ಅಂದು ನಡೆದ ಸಮಾರಂಭದಲ್ಲಿ ನಟ ರಾಮ್ಚರಣ್ ಸ್ಪಾಟ್‌ಲೈಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಕಾರ್ಯಕ್ರಮದಲ್ಲಿ ಜೂನಿಯರ್ ಎನ್‌ಟಿಆರ್ ಅವರ ಅನುಪಸ್ಥಿತಿ ಅವರ ಅಭಿಮಾನಿಗಳ ಅಸಮಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಹೆಚ್‌ಸಿಎ ಟ್ವೀಟ್ ಮೂಲಕ ಸ್ಪಷ್ಟನೆ ಕೂಡ ನೀಡಿತ್ತು.
ಆಲಿಯಾರಿಗೂ ಹೆಚ್‌ಸಿಎ ಪ್ರಶಸ್ತಿ:ಸದ್ಯ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಫಿಲ್ಮ್ ಅವಾರ್ಡ್ಸ್ ಟ್ವೀಟ್ ಮೂಲಕ ಶುಭ ಸುದ್ದಿಯೊಂದನ್ನು ಹಂಚಿಕೊಂಡಿದೆ. ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಕ್ಕಾಗಿ ಜೂನಿಯರ್ ಎನ್‌ಟಿಆರ್ ಮತ್ತು ಆಲಿಯಾ ಭಟ್ ಇಬ್ಬರಿಗೂ ಸ್ಪಾಟ್‌ಲೈಟ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಮುಂದಿನ ವಾರ ಇಬ್ಬರಿಗೂ ಪ್ರಶಸ್ತಿಗಳನ್ನು ಕಳುಹಿಸಲಾಗುವುದು ಎಂದು ಟ್ವಿಟರ್‌ನಲ್ಲಿ ಹೆಚ್‌ಸಿಎ ತಿಳಿಸಿದೆ.