ಹೈದರಾಬಾದ್: ನಿಗದಿಯಾಗಿದ್ದ ಮಾಲ್ಡೀವ್ಸ್ ಪ್ರವಾಸವನ್ನು ಟಾಲಿವುಡ್ ನಟ ನಾಗಾರ್ಜುನ್ ಹಠಾತ್ ರದ್ದು ಮಾಡಿದ್ದಾರೆ. ''ನಾನು ಕಾರಣಾಂತರಗಳಿಂದ ಜನಪ್ರಿಯ ಪ್ರವಾಸಿ ತಾಣ ಮಾಲ್ಡೀವ್ಸ್‌ಗೆ ತೆರಳುತ್ತಿಲ್ಲ. ಇದರ ಬದಲಿಗೆ ಲಕ್ಷದ್ವೀಪಕ್ಕೆ ಹೋಗುತ್ತೇನೆ" ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಟ, "ರಿಯಾಲಿಟಿ ಶೋ ಬಿಗ್ ಬಾಸ್ ಮತ್ತು ನಾ ಸಾಮಿರಂಗ ಚಿತ್ರದ ಚಿತ್ರೀಕರಣದಿಂದ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಆಗಿರಲಿಲ್ಲ. ಸುಮಾರು 75 ದಿನಗಳ ಕಾಲ ಬಿಡುವಿಲ್ಲದ ಕೆಲಸದಲ್ಲಿದ್ದೆ. ಹಾಗಾಗಿ ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ್ದೆ. ಸಂಕ್ರಾಂತಿ ನಿಮಿತ್ತ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೆ. ಆದರೆ, ಅದನ್ನು ರದ್ದುಪಡಿಸಿರುವೆ. ಮುಂದಿನ ವಾರ ಲಕ್ಷದ್ವೀಪಕ್ಕೆ ಪ್ರಯಾಣಿಸಲು ಯೋಜಿಸಿದ್ದೇನೆ. ಯಾರು ಏನು ಹೇಳುತ್ತಾರೋ ಎಂಬ ಭಯದಿಂದ ನಾನು ಆ ಪ್ರವಾಸ ರದ್ದು ಮಾಡಲಿಲ್ಲ. ಅನಾರೋಗ್ಯದ ಕಾರಣಕ್ಕೆ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದೇನೆ" ಎಂದಿದ್ದಾರೆ.
"ಅಲ್ಲದೇ ಪ್ರಧಾನಿಗಳ ಬಗ್ಗೆ ಮಾಲ್ಡೀವ್ಸ್ ನಾಯಕರು ಆಡಿದ ಮಾತುಗಳು ಸಹ ನನಗೆ ತುಂಬಾ ತಪ್ಪಾಗಿ ಕಂಡವು. 150 ಕೋಟಿ ಜನರನ್ನು ಆಳುವ ಪ್ರಧಾನಿ ವಿರುದ್ಧ ಅವರು ಹರಿಬಿಟ್ಟು ಕಾಮೆಂಟ್‌ಗಳು, ಎಕ್ಸ್ ಪೋಸ್ಟ್‌ಗಳು ಮತ್ತು ಹೇಳಿಕೆಗಳು ಅಷ್ಟು ಆರೋಗ್ಯಕರ ಅನ್ನಿಸಲಿಲ್ಲ. ಅದರ ದುಷ್ಪರಿಣಾಮವನ್ನು ಆ ದೇಶ ಹೇಗೆ ಎದುರಿಸಬೇಕೋ ಅದನ್ನು ಎದುರಿಸುತ್ತಿದೆ. ಕ್ರಿಯೆಗೆ ಅನುಗುಣವಾಗಿ ಪ್ರತಿಕ್ರಿಯೆ ಇರುತ್ತದೆ. ಸದ್ಯಕ್ಕೆ ಮಾಲ್ಡೀವ್ಸ್‌ಗಿಂತ ಲಕ್ಷದ್ವೀಪಕ್ಕೆ ಹೋಗುವುದನ್ನು ಇಷ್ಟಪಡುತ್ತೇನೆ" ಎಂದು ನಾಗಾರ್ಜುನ್ ಹೇಳಿದ್ದಾರೆ.
ಇದನ್ನೂ ಓದಿ:ಉಡುಪಿ ಸೇರಿದಂತೆ ನಮ್ಮಲ್ಲೂ ಅದ್ಭುತ ಬೀಚ್‌ಗಳಿವೆ: ಮಾಲ್ಡೀವ್ಸ್‌ಗೆ ಕ್ರಿಕೆಟಿಗರ ಟಾಂಗ್
ಲಕ್ಷದ್ವೀಪ ಭೇಟಿ ಬಳಿಕ ಭಾರತ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ಭಾರತದಲ್ಲಿ 'ಬಾಯ್ಕಾಟ್ ಮಾಲ್ಡೀವ್ಸ್' ಅಭಿಯಾನ ಶುರುವಾಗಿತ್ತು. ಆ ಪಟ್ಟಿಗೆ ಇದೀಗ ನಾಗಾರ್ಜುನ ಕೂಡ ಸೇರಿಕೊಂಡಂತಾಗಿದೆ. ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಅನೇಕ ಕ್ರೀಡಾಪಟುಗಳು ಲಕ್ಷದ್ವೀಪದ ಪರಿಸರದ ಬಗ್ಗೆ ಮಾಲ್ಡೀವ್ಸ್ ಸಚಿವರು ಮಾಡಿದ ಟೀಕೆಗಳನ್ನು ಖಂಡಿಸಿದ್ದರು. ಬಾಲಿವುಡ್ ನಟ, ನಟಿಯರು ಸಹ ಮಾಲ್ಡೀವ್ಸ್ ಬದಲು ಭಾರತದ ದ್ವೀಪಗಳಿಗೆ ತೆರಳಿ ಎಂದು ಕರೆ ನೀಡಿದ್ದರು. ಕೆಲವರು ಮಾಲ್ಡೀವ್ಸ್ ಪ್ರವಾಸ ಕ್ಯಾನ್ಸಲ್ ಮಾಡುವ ಮೂಲಕ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೂ ಸಾಥ್ ನೀಡಿದ್ದರು. ಪ್ರವಾಸಕ್ಕಾಗಿ ಬುಕ್ ಮಾಡಿದ ಫ್ಲೈಟ್ ಟಿಕೆಟ್‌ಗಳನ್ನು ಸಹ ರದ್ದುಪಡಿಸಿದ್ದಾರೆ.