ವಿಭಿನ್ನ ಕಥೆಗಳು ಹಾಗೂ ವಿಚಿತ್ರ ಗೆಟಪ್ನಿಂದಲೇ ಕಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿರುವ ನಟ ಧನುಷ್. ಎಂತಹದ್ದೇ ಪಾತ್ರ ಕೊಟ್ಟರೂ, ಒಪ್ಪಿಕೊಂಡು ಸಿನಿಮಾ ಮಾಡುತ್ತಾರೆ. ಕಠಿಣ ಪಾತ್ರಗಳನ್ನು ಸುಲಭವಾಗಿ ಸ್ವೀಕರಿಸಿ, ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಾರೆ. ಇದೀಗ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಧನುಷ್ ಮತ್ತು ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಕಾಂಬೋದಲ್ಲಿ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಬರುತ್ತಿದೆ.
ನಿರ್ದೇಶಕ ಅರುಣ್ ಮಾಥೇಶ್ವರನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಅಭಿಮಾನಿಗಳು ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ತಾರಾ ಬಳಗವು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಕೆಲವು ದಿನಗಳ ಹಿಂದೆ ಸಿನಿಮಾ ತಯಾರಕರು ಧನುಷ್ ಮತ್ತು ಶಿವಣ್ಣ ಜೊತೆಗಿರುವ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದರು. ಧನುಷ್ ಹುಟ್ಟುಹಬ್ಬದಂದು ಟೀಸರ್ ರಿಲೀಸ್ ಮಾಡುವುದಾಗಿಯೂ ಘೋಷಿಸಿದ್ದರು.
ನಾಳೆ (ಜುಲೈ 28) ಧನುಷ್ ಅವರ ಹುಟ್ಟುಹಬ್ಬ. ಒಂದು ದಿನ ಮುಂಚಿತವಾಗಿಯೇ ಅವರಿಗೆ ಶಿವಣ್ಣ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಧನುಷ್ ಬಗ್ಗೆ ಶಿವಣ್ಣ ಬಹಳ ಪ್ರೀತಿಯಿಂದ ಮಾತನಾಡಿದ್ದಾರೆ. "ನಾನು ಧನುಷ್ ಅವರ ದೊಡ್ಡ ಅಭಿಮಾನಿ. ಮೊದಲಿನಿಂದಲೂ ಧನುಷ್ ಅವರ ಚಿತ್ರಗಳನ್ನು ನೋಡಿ ಅವರಿಗೆ ಹೇಳುತ್ತಿದ್ದೆ. ಆದರೆ, ಈ ವರ್ಷದ ಅವರ ಹುಟ್ಟುಹಬ್ಬಕ್ಕೆ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ. ಈ ಮುಖಾಂತರ ಅವರಿಗೆ ಸ್ಪೆಷಲ್ ಗಿಫ್ಟ್ ಸಿಗಲಿದೆ. ನಾನು ಕೂಡ ಟೀಸರ್ ಬಗ್ಗೆ ಎಕ್ಸೈಟ್ ಆಗಿದ್ದೇನೆ" ಎಂದು ಶಿವ ರಾಜ್‌ಕುಮಾರ್ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಅವರು ಧನುಷ್ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಇದು ಅಣ್ಣ ತಮ್ಮನ ಕಥೆ ಅಲ್ಲ. ಆದರೆ ಶಿವಣ್ಣ ಪಾತ್ರಕ್ಕೆ ಸಿನಿಮಾದಲ್ಲಿ ತನ್ನದೇ ಸ್ಕೋಪ್ ಇದೆ. ಹಲವಾರು ವರ್ಷಗಳಿಂದ ಶಿವ ರಾಜ್‌ಕುಮಾರ್ ಹಾಗೂ ಧನುಷ್ ನಡುವೆ ಆತ್ಮೀಯ ಸ್ನೇಹವಿದೆ. ಈ ಕಾರಣಕ್ಕೆ ಈ ಇಬ್ಬರು ಸ್ಟಾರ್ ನಟರು ಸಿನಿಮಾಗಳಿಗೆ ಸಪೋರ್ಟ್ ಮಾಡ್ತಾ ಇದ್ದಾರೆ. ಈ ಹಿಂದೆ ಶಿವರಾಜ್‌ಕುಮಾರ್ ನಟಿಸಿದ್ದ ವಜ್ರಕಾಯ ಸಿನಿಮಾದ ನೋ ಪ್ರಾಬ್ಲಮ್ ಹಾಡಿಗೆ ಧನುಷ್ ಧ್ವನಿ ನೀಡಿದ್ದರು.
"ನನ್ನನ್ನು ನಾನು ಧನುಶ್ ಅವರಲ್ಲಿ ಕಾಣುತ್ತೇನೆ. ಅವರ ವ್ಯಕ್ತಿತ್ವ ಸಹ ನನ್ನೊಂದಿಗೆ ಹೋಲುತ್ತದೆ. ಅವರು ನನ್ನಂತೆಯೇ ಇದ್ದಾರೆ ಅಥವಾ ನಾನು ಅವರಂತೆ ಇದ್ದೇನೆ. ಅವರೊಟ್ಟಿಗೆ ನಟಿಸುವ ಅವಕಾಶವನ್ನು ಕೈಬಿಡುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಸಿನಿಮಾವನ್ನು ಒಪ್ಪಿಕೊಂಡೆ" ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶಿವಣ್ಣ ಹೇಳಿದ್ದರು. ಇನ್ನು ಚಿತ್ರದ ಟೀಸರ್ ಜುಲೈ 28ರಂದು ಧನುಷ್ ಹುಟ್ಟುಹಬ್ಬದ ಪ್ರಯುಕ್ತ ಮಧ್ಯರಾತ್ರಿ 12.01ಕ್ಕೆ ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ಧನುಷ್ಗೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ. ಇವರಲ್ಲದೇ ಸಂದೀಪ್ ಕಿಶನ್, ಶಿವ ರಾಜ್‌ಕುಮಾರ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಕಲನವನ್ನು ಶ್ರೇಯಸ್ ಕೃಷ್ಣ ಮತ್ತು ನಾಗರೂನ್ ಮಾಡಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ:Bhola Shankar Trailer: ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಭೋಲಾ ಶಂಕರ್' ಟ್ರೇಲರ್ ರಿಲೀಸ್