ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಹೆಸರು ಕಳೆದ ಕೆಲ ದಿನಗಳಿಂದ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರೊಂದಿಗೆ ಕೇಳಿ ಬರುತ್ತಿದೆ. ಈ ಸುಂದರ ಜೋಡಿಯ ಮದುವೆ ವದಂತಿ ದಿನದಿಂದ ದಿನಕ್ಕೆ ರೆಕ್ಕೆಪುಕ್ಕ ಪಡೆಯುತ್ತಲೇ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಪರಿಣಿತಿ ಅವರು ಎಎಪಿ ನಾಯಕ ರಾಘವ್ ಚಡ್ಡಾರನ್ನು ನಿಜವಾಗಿಯೂ ಮದುವೆಯಾಗಲಿದ್ದಾರೆಯೇ ಎಂಬ ಒಂದೇ ಒಂದು ಪ್ರಶ್ನೆ ನಟಿಯ ಅಭಿಮಾನಿಗಳಲ್ಲಿದೆ. ಆದ್ರೆ ಈ ಇಬ್ಬರೂ ಮಾತ್ರ ಇನ್ನೂ ಮೌನ ಮುಂದುವರಿಸಿದ್ದಾರೆ.
ಜೋಡಿಯನ್ನು ಅಭಿನಂದಿಸಿದ ಗಾಯಕ:ಇದೀಗ ಪಂಜಾಬಿ ಗಾಯಕ ಮತ್ತು ನಟ ಹಾರ್ಡಿ ಸಂಧು ಕೂಡ ಈ ಸುದ್ದಿಯನ್ನು ಖಚಿತಪಡಿಸಿ ಪರಿಣಿತಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಹಾರ್ಡಿ ಸಂಧು ಕಳೆದ ವರ್ಷ 'ಕೋಡ್ ನೇಮ್: ತಿರಂಗಾ' ಚಿತ್ರದಲ್ಲಿ ಪರಿಣಿತಿ ಚೋಪ್ರಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ಪರಿಣಿತಿ ರಾಘವ್ ಮದುವೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಇದು ಅಂತಿಮವಾಗಿ ನಡೆಯುತ್ತಿದೆ, ನನಗೆ ಬಹಳ ಸಂತೋಷವಾಗಿದೆ. ನಾನು ಅವರಿಗೆ ಶುಭ ಹಾರೈಸುತ್ತೇನೆ, ಅವರಿಗೆ ಕರೆ ಮಾಡಿ ಅಭಿನಂದಿಸಿದೆ' ಎಂದು ತಿಳಿಸಿದರು.
ಹಾರ್ಡಿ ಸಂಧು ಹೇಳಿದ್ದಿಷ್ಟು..:'ಕೋಡ್ ನೇಮ್: ತಿರಂಗಾ' ಶೂಟಿಂಗ್ ಸಮಯದಲ್ಲಿ ಅವರ ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಒಳ್ಳೆಯ ಹುಡುಗ ಸಿಕ್ಕಾಗ ಮದುವೆ ಆಗುತ್ತೇನೆ ಎಂದು ಹೇಳುತ್ತಿದ್ದರು. ಅಂತಿಮವಾಗಿ ಮದುವೆ ಹಂತಕ್ಕೆ ತಲುಪಿದ್ದಾರೆ. ಅವರ ಈ ನಿರ್ಧಾರದಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಹಾರ್ಡಿ ಸಂಧು ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸದ್ದು ಮಾಡುತ್ತಿದೆ.
ಸಂಜೀವ್ ಅರೋರಾ ಟ್ವೀಟ್:ಈ ಮೊದಲು ಎಎಪಿ ನಾಯಕ ಸಂಜೀವ್ ಅರೋರಾ ಅವರ ಟ್ವೀಟ್ ಕೂಡ ವೈರಲ್ ಆಗಿತ್ತು. ಟ್ವೀಟ್ ಮೂಲಕ ಅವರು ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರ ಮದುವೆಗೆ ಅಭಿನಂದನೆ ಸಲ್ಲಿಸಿದ್ದರು. ನಾನು ರಾಘವ್ ಮತ್ತು ಪರಿಣಿತಿ ಅವರನ್ನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರು.