ಭಾರತೀಯ ಸಿನಿಮಾ ಲೋಕದ ದಿಗ್ಗಜ ಕಮಲ್ ಹಾಸನ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ದಕ್ಷಿಣ ಭಾರತದ ಸಿನಿಮೋದ್ಯಮದಲ್ಲಿ ಹಿರಿಯ ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಕಮಲ್ ಹಾಸನ್ 69ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಹಿರಿಯ ನಟನಿಗೆ ಎಲ್ಲೆಡೆಯಿಂದ ಶುಭ ಸಂದೇಶಗಳು ಹರಿದುಬರುತ್ತಿವೆ.
ಲೋಕೇಶ್ ಕನಕರಾಜ್, ನಾಗ್ ಅಶ್ವಿನ್ ಮತ್ತು ಮಣಿರತ್ನಂ, ಶಂಕರ್ ಷಣ್ಮುಗಂ ಅವರಂತಹ ಹೆಸರಾಂತ ನಿರ್ದೇಶಕರು ಕಮಲ್ ಹಾಸನ್ ಮೇಲೆ ಗಾಢ ಪ್ರಭಾವ ಬೀರಿದ್ದಾರೆ. ಆರು ದಶಕಗಳಿಂದ ಬಣ್ಣದ ಲೋಕದಲ್ಲಿ ವಿಶಿಷ್ಠ ಛಾಪು ಮೂಡಿಸುತ್ತಿರುವ ಕಮಲ್ ಹಾಸನ್ ಅವರ ಯಶಸ್ವಿ ವೃತ್ತಿಜೀವನ ಯುವ ಪೀಳಿಗೆಗೆ ಸ್ಫೂರ್ತಿ ನೀಡಬಲ್ಲದು.
ಅಭಿನಯ ಚಾತುರ್ಯದಿಂದ ಪ್ರೇಕ್ಷಕರನ್ನು ಹಿಡಿದಿಟ್ಟು, ಮೋಡಿ ಮಾಡುವುದರೊಂದಿಗೆ ನಿರ್ದೇಶಕರನ್ನೂ ಪ್ರೇರೇಪಿಸಿದವರು ಕಮಲ್ ಹಾಸನ್. ಬಾಲ ಕಲಾವಿದನಾಗಿ ಸಿನಿಮಾ ವೃತ್ತಿ ಆರಂಭಿಸಿ, ಮುಂದೆ ಮಹತ್ವದ ಪಾತ್ರಗಳಲ್ಲಿ ಮಿಂಚು ಹರಿಸಿದ ಕ್ಷಣಗಳವರೆಗೂ ಇವರ ಬದುಕು ಸ್ಪೆಷಲ್ ಅನ್ನಿಸುವಂತಿದೆ. ಹಾಸ್ಯನಟ, ಟ್ರ್ಯಾಜಿಕ್ ಹೀರೋ, ಖಳನಾಯಕ ಹೀಗೆ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುತ್ತಾ ಬಂದಿದ್ದಾರೆ. ಅನುಭವಿ ನಿರ್ದೇಶಕರು, ಉದಯೋನ್ಮುಖ ಪ್ರತಿಭೆಗಳಿಂದ ಹಿಡಿದು ಅಪಾರ ಅಭಿಮಾನಿಗಳ ಮೆಚ್ಚುಗೆ ಗಳಿಸಿದವರು ಕಮಲ್ ಹಾಸನ್.
ಇದನ್ನೂ ಓದಿ:ಮಣಿರತ್ನಂ - ಕಮಲ್ ಹಾಸನ್ ಕಾಂಬೋದ 'KH234' ತಂಡ ಸೇರಿದ ದುಲ್ಕರ್ ಸಲ್ಮಾನ್, ತ್ರಿಶಾ
ಕಮಲ್ ಹಾಸನ್ ಮುಂದಿನ ಸಿನಿಮಾ: ಸದ್ಯ ಇವರು ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'Thug Life' (ಹಿಂದೆ KH 234 ಎಂದು ಹೆಸರಿಡಲಾಗಿತ್ತು) ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಈ ಮೂಲಕ ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ಮತ್ತೊಮ್ಮೆ ಕೈ ಜೋಡಿಸುತ್ತಿದ್ದಾರೆ. ಮಣಿರತ್ನಂ ನಿರ್ದೇಶನ ಶೈಲಿ, ದೂರದೃಷ್ಟಿ, ಕಥೆ ಹೇಳುವ ಅದ್ಭುತ ವೈಖರಿಯ ಬಗ್ಗೆ ವಿಶೇಷವಾಗಿ ಏನೂ ಹೇಳಬೇಕಿಲ್ಲ. ಅದೇ ರೀತಿ, ಕಮಲ್ ಹಾಸನ್ ತಮಗೆ ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತಾರೆ ಅನ್ನೋದ್ರಲ್ಲಿ ಕಿಂಚಿತ್ತೂ ಸಂದೇಹವೂ ಇಲ್ಲ. ಮಣಿರತ್ನಂ ಮತ್ತು ಕಮಲ್ ಹಾಸನ್ ಕಾಂಬಿನೇಶನ್ನ ಈ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ:ರಿಲೀಸ್ಗೂ ಮುನ್ನವೇ 'ಗೇಮ್ ಚೇಂಜರ್' ಹಾಡು ಲೀಕ್; ಇಬ್ಬರು ಸೈಬರ್ ಪೊಲೀಸರ ವಶಕ್ಕೆ
1987ರಲ್ಲಿ ಬಿಡುಗಡೆಯಾದ 'ನಾಯಕನ್' ಚಿತ್ರದಲ್ಲಿ ಇಬ್ಬರೂ ಕೆಲಸ ಮಾಡಿದ್ದರು. ಈ ಸಿನಿಮಾ ಕಥೆಯ ನಿರೂಪಣಾ ಶೈಲಿ ಪ್ರೇಕ್ಷಕರ ಮನದಾಳಲ್ಲಿ ಈಗಲೂ ಅದ್ಭುತ ಚಿತ್ರವಾಗುಳಿದಿದೆ. ಹೀಗಾಗಿ ಮುಂದಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 36 ವರ್ಷಗಳ ನಂತರ ಕಮಲ್ ಹಾಸನ್-ಮಣಿರತ್ನಂ ಹೊಸ ಸಿನಿಮಾವೊಂದರಲ್ಲಿ ಜೊತೆಯಾಗುತ್ತಿದ್ದಾರೆ. ಕಮಲ್ ಹಾಸನ್ ಅವರ 234ನೇ ಚಿತ್ರದಲ್ಲಿ ಸೌತ್ನ ಬಹುಬೇಡಿಕೆಯ ನಟರಾದ ದುಲ್ಕರ್ ಸಲ್ಮಾನ್, ತ್ರಿಶಾ ನಟಿಸುತ್ತಿದ್ದಾರೆ. ಇದೊಂದು ಆ್ಯಕ್ಷನ್ ಎಂಟರ್ಟೈನರ್ ಆಗಲಿದೆ ಅನ್ನೋದು ಚಿತ್ರತಂಡದ ಮಾತು.