ಸಂಕ್ರಾಂತಿಗೆ ಟಾಲಿವುಡ್ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಈ ಪೈಕಿ 'ಹನುಮಾನ್' ಚಿತ್ರವೂ ಒಂದು. ಈ ಚಿತ್ರತಂಡ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಮಾರಾಟವಾಗುವ ಚಿತ್ರದ ಪ್ರತಿ ಟಿಕೆಟ್‌ನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ 5 ರೂಪಾಯಿ ದೇಣಿಗೆ ನೀಡುವ ನಿರ್ಧಾರವನ್ನು ಮೆಗಾಸ್ಟಾರ್ ಚಿರಂಜೀವಿ ಘೋಷಿಸಿದ್ದಾರೆ.
ಭಾನುವಾರ ಸಂಜೆ ಹೈದರಾಬಾದ್‌ನಲ್ಲಿ ನಡೆದ ಸಿನಿಮಾದ ಪೂರ್ವಭಾವಿ ಸಮಾರಂಭದಲ್ಲಿ ಚಿರಂಜೀವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇತಿಹಾಸದಲ್ಲಿ ಸ್ಮರಣೀಯ ಕ್ಷಣ. ದೇಗುಲದ ಉದ್ಘಾಟನಾ ಸಮಾರಂಭಕ್ಕೆ ನನಗೆ ಆಹ್ವಾನವಿದೆ. ಜನವರಿ 22ರಂದು ಕುಟುಂಬ ಸದಸ್ಯರೊಂದಿಗೆ ತೆರಳಲಿದ್ದೇನೆ" ಎಂದರು.
'ಹನುಮಂತ್' ಪ್ರೀ ರಿಲೀಸ್ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿರಂಜೀವಿ ಹಲವು ಕುತೂಹಲಕಾರಿ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. "ಈ ಪ್ರೀ ರಿಲೀಸ್ ಈವೆಂಟ್‌ಗೆ ಬರಲು ಕೆಲವು ಕಾರಣಗಳಿವೆ. ನನ್ನ ಆರಾಧ್ಯದೈವ ಅಮ್ಮಣ್ಣನ ನಂತರ ಅನುಕ್ಷಣ ಪ್ರಾರ್ಥಿಸುವ ದೇವರು ಆಂಜನೇಯಸ್ವಾಮಿ. ಅವರನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಾದ ಚಿತ್ರವಿದು. ಟ್ರೇಲರ್ ಮತ್ತು ಟೀಸರ್ ನೋಡಿದಾಗ ಪ್ರತಿ ದೃಶ್ಯದಲ್ಲೂ ನೈಪುಣ್ಯತೆ ನೋಡಿದ್ದೇನೆ. ಈ ಬಗ್ಗೆ ನಿರ್ದೇಶಕರೊಂದಿಗೆ ಮಾತನಾಡಿ ಸಾಕಷ್ಟು ವಿಚಾರ ತಿಳಿದುಕೊಂಡೆ. ಹನುಮಂತನನ್ನು ಶಿಸ್ತು, ಬದ್ಧತೆಯಿಂದ ಪೂಜಿಸಿ ಈ ಮಟ್ಟಕ್ಕೆ ಬೆಳೆದೆ. ಹೀಗೆ ವೇದಿಕೆಯಲ್ಲಿ ನಾನು ಹನುಮಂತನ ಬಗ್ಗೆ ಮಾತನಾಡಲೇಬೇಕು ಅನ್ನಿಸಿತು. ಅದಕ್ಕಾಗಿಯೇ ಈ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿಸಿದಾಗ ಮರುಮಾತಿಲ್ಲದೆ ಒಪ್ಪಿಕೊಂಡೆ" ಎಂದು ಚಿರಂಜೀವಿ ಹೇಳಿದರು.