ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಪ್ರಸ್ತುತ ದೇಶಾದ್ಯಂತ ರಾಮನ ಜಪ ಜೋರಾಗಿದೆ. ಕೋಟ್ಯಂತರ ಭಾರತೀಯರು ಕಾತರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಭಕ್ತಿಯ ನಿಯಮ ಏನೆಂದು ತೋರಿಸಿಕೊಟ್ಟ ರಾಮಭಕ್ತ ಹನುಮನ ಕುರಿತಾದ ಹನುಮಾನ್ ಚಾಲಿಸಾ ಬಿಡುಗಡೆಯಾಗಲು ಸಜ್ಜಾಗಿದೆ.
ಈಗಾಗಲೇ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಹನುಮಾನ್ ಚಾಲಿಸಾ ಲಭ್ಯವಿದ್ದು, ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಭಕ್ತಿಗೀತೆ ಇದಾಗಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹನುಮಾನ್ ಚಾಲಿಸಾ ಮೂಡಿ ಬರುತ್ತಿದೆ. ಭಾರತದ ಜನಪ್ರಿಯ ಗಾಯಕ, ನಮ್ಮ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರು ಸುಶ್ರಾವ್ಯವಾಗಿ, ಭಕ್ತಿ ಪರವಶರಾಗಿ ಈ ಹನುಮಾನ್ ಚಾಲಿಸಾವನ್ನು ಹಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡಿರುವ ಲೋಕಿ ತವಸ್ಯ ಈ ಹನುಮಾನ್ ಚಾಲಿಸಾಗೆ ಸಂಗೀತದ ಸ್ಪರ್ಶ ನೀಡಿದ್ದಾರೆ.
ಹನುಮನ ಕುರಿತಾಗಿ ಹಲವು ಕೃತಿಗಳು, ಗೀತೆಗಳು, ಭಕ್ತಿಗೀತೆಗಳು ಬಂದಿವೆ. ಆದರೆ ಹನುಮಾನ್ ಚಾಲಿಸಾವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಒಂದು ಆಲ್ಬಂ ತಯಾರಿಸಲಾಗಿದೆ. ಇಂತಹ ಒಂದು ಅದ್ಭುತ ಕೆಲಸವನ್ನು ಹನುಮನ ಅಪ್ರತಿಮ ಭಕ್ತರಾದ ಶ್ರೀ ವೆಂಕಟೇಶ್ ಉತ್ತರಹಳ್ಳಿ ಅವರು ಮಾಡಿದ್ದಾರೆ. ಇವರು ಬಹಳ ಶ್ರದ್ಧೆ ವಹಿಸಿ, ತನು ಮನ ಧನವ ಸಮರ್ಪಿಸಿ, ಲಕ್ಷ್ಮಿ ವೆಂಕಟೇಶ್ವರ ಆರ್ಜಿ510 ಉತ್ತರಹಳ್ಳಿ ಬ್ಯಾನರ್ ಅಡಿಯಲ್ಲಿ ಈ ಆಲ್ಬಂ ಅನ್ನು ನಿರ್ಮಿಸಿದ್ದಾರೆ. ಕನ್ನಡಕ್ಕೆ ತರ್ಜುಮೆ ಮಾಡಿರುವ ಹನುಮಾನ್ ಚಾಲಿಸಾ ಸದ್ಯದಲ್ಲೇ ಬಿಡುಗಡೆ ಆಗಲಿದೆ.