ಜನವರಿ 12 ರಂದು ತೆರೆಗಪ್ಪಳಿಸಿರೋ ತೆಲುಗು ಚಿತ್ರರಂಗದ ಎರಡು ಬಹುನಿರೀಕ್ಷಿತ ಸಿನಿಮಾಗಳು ಉತ್ತಮ ಪ್ರದರ್ಶನ ಮುಂದುವರಿಸಿವೆ. ಕಳೆದ ಶುಕ್ರವಾರ ತೇಜ ಸಜ್ಜಾ ಅವರ ಹನುಮಾನ್ ಮತ್ತು ಮಹೇಶ್ ಬಾಬು ಅವರ ಗುಂಟೂರು ಖಾರಂ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಮುಖಾಮುಖಿಯಾಗಿ ಬಾಕ್ಸ್ ಆಫೀಸ್ ಪೈಪೋಟಿ ಪ್ರಾರಂಭಿಸಿದವು. ಭರ್ಜರಿ ಫೈಟ್ ನಡುವೆಯೂ, ಎರಡೂ ಚಿತ್ರಗಳು ಯಶಸ್ವಿಯಾಗಿವೆ. ಗುಂಟೂರು ಖಾರಂ ತೆರೆಕಂಡ ಆರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಹನುಮಾನ್ ಗಳಿಕೆಯ ಅಂಕಿ-ಅಂಶ ಕೂಡ ಚೆನ್ನಾಗಿದೆ.
ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಚಿತ್ರದಲ್ಲಿ ತೇಜ ಸಜ್ಜಾ ಮತ್ತು ವಿನಯ್ ರೈ ನಟಿಸಿದ್ದಾರೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ.ನತ್ತ ದಾಪುಗಾಲು ಹಾಕುತ್ತಿದೆ. ಜನವರಿ 17 ರಂದು ಅಂದರೆ ನಿನ್ನೆ ಚಿತ್ರದ ಗಳಿಕೆಯಲ್ಲಿ ಸಣ್ಣ ಮಟ್ಟಿನ ಇಳಿಕೆ ಆಗಿದ್ದರೂ ಕೂಡ, ವಾರದ ದಿನಗಳಲ್ಲಿ ಎರಡಂಕಿಯ ಕಲೆಕ್ಷನ್ ಮಾಡುತ್ತಿದೆ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಬುಧವಾರದಂದು ಹನುಮಾನ್ ಭಾರತದಲ್ಲಿ ಸರಿಸುಮಾರು 11.5 ಕೋಟಿ ರೂ. ಗಳಿಸಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ 80.46 ಕೋಟಿ ರೂಪಾಯಿ. ತೆಲುಗು, ಮಲಯಾಳಂ, ತಮಿಳು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ.