ಟಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆಯ ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ನ್ಯಾಚುರಲ್ ಸ್ಟಾರ್ ನಾನಿ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಹಾಯ್ ನಾನ್ನ'. 'ದಸರಾ' ಬ್ಲಾಕ್ಬಸ್ಟರ್ ಆದ ಬಳಿಕ ನಾನಿ ನಟಿಸುತ್ತಿರುವ 30ನೇ ಸಿನಿಮಾವಿದು. ಇದೀಗ ಚಿತ್ರತಂಡ 'ಹಾಯ್ ನಾನ್ನ' ಚಿತ್ರದ ಮತ್ತೊಂದು ಹಾಡನ್ನು ಅನಾವರಣಗೊಳಿಸಿದೆ.
'ಹಾಯ್ ನಾನ್ನ' ಸಿನಿಮಾದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರತಂಡ ಪ್ರಮೋಷನ್ನಲ್ಲಿ ಕಸರತ್ತು ನಡೆಸುತ್ತಿದೆ. ಅದರಲ್ಲೂ ಮ್ಯೂಸಿಕಲ್ ಪ್ರಚಾರ ಚೆನ್ನಾಗಿ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಮೂರನೇ ರೊಮ್ಯಾಂಟಿಕ್ ಮೆಲೋಡಿಯಸ್ ಹಾಡು ಬಿಡುಗಡೆಯಾಗಿದೆ.
ಎಮೋಶನಲ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ ಮತ್ತು ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ. ತಂದೆ ಪಾತ್ರದಲ್ಲಿ ನಾನಿ ಹಾಗೂ ಮಗಳ ಪಾತ್ರದಲ್ಲಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ. ನಾನಿಗೆ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಂಡಿದ್ದಾರೆ. ಇದೀಗ ಬಿಡುಗಡೆಯಾಗಿರುವ ಹಾಡಿನಲ್ಲಿ ನಾನಿ ಹಾಗೂ ಮೃಣಾಲ್ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ನಡುವಿನ ಪ್ರೀತಿಯನ್ನು ಸಾಹಿತ್ಯ ರೂಪದಲ್ಲಿ ಬಿಂಬಿಸಲಾಗಿದೆ.
ಇದನ್ನೂ ಓದಿ:ಟೈಗರ್ ಈಸ್ ಬ್ಯಾಕ್: ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ ಸಲ್ಲು ಕ್ಯಾಟ್ ಸಿನಿಮಾದ ಹೊಸ ವಿಡಿಯೋ
ಇಡೀ ಹಾಡು ನಾನಿ ಮತ್ತು ಮೃಣಾಲ್ ನಡುವಿನ ಮಧುರ ಮತ್ತು ರೊಮ್ಯಾಂಟಿಕ್ ದೃಶ್ಯಗಳನ್ನು ಒಳಗೊಂಡಿದೆ. ಕೃಷ್ಣಕಾಂತ್ ನೀಡಿರುವ ಸಾಹಿತ್ಯ ಆಕರ್ಷಕ ಮತ್ತು ಅರ್ಥಪೂರ್ಣವಾಗಿದೆ. ಕಾಲ ಭೈರವ ಮತ್ತು ಶಕ್ತಿಶ್ರೀ ಗೋಪಾಲನ್ ಅವರ ಗಾಯನ ಭಾವಪೂರ್ಣವಾಗಿದೆ. ಹಸನ್ ಅಬ್ದುಲ್ ವಹಾಬ್ ಸಂಯೋಜಿಸಿದ ಸಂಗೀತವೂ ತುಂಬಾ ಮಧುರವಾಗಿದೆ.
'ಹಾಯ್ ನಾನ್ನ' ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ನಿರ್ದೇಶಕನಾಗಿ ಇದು ಇವರ ಚೊಚ್ಚಲ ಚಿತ್ರ. ವೈರ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿ ಮೋಹನ್ ಚೆರುಕುರಿ, ಡಾ. ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾನು ಜಾನ್ ವರ್ಗೀಸ್ ಐಎಸ್ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಮತ್ತೊಂದೆಡೆ, ಚಿತ್ರದಲ್ಲಿ 'ಸಲಾರ್' ಬ್ಯೂಟಿ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚಿನ ಹೆಚ್ಚಿನ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ಪಂಚಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ದಕ್ಷಿಣ ರಾಜ್ಯಗಳ ಜನರಿಗೆ ತಲುಪುವ ಸಲುವಾಗಿ ಒಂದೇ ಟೈಟಲ್ ಇರಲಿ ಎಂದು ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ 'ಹಾಯ್ ನಾನ್ನ' ಎಂದೇ ಶೀರ್ಷಿಕೆ ಇಡಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಆರಂಭವಾಗಿರುವ ಈ ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಡಾರ್ಲಿಂಗ್ ಕೃಷ್ಣರ 'ಶುಗರ್ ಫ್ಯಾಕ್ಟರಿ': ಭಾವನೆ ಬಿಂಬಿಸುವ 'ಹಣೆಯಬರಹ' ಗೀತೆಗೆ ಮೆಚ್ಚುಗೆ