ಸಿನಿಮಾ ರಂಗಕ್ಕೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೂ ಒಂದು ವಿಶೇಷ ನಂಟಿದೆ. ಹೆಚ್ಡಿಕೆ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಸಿನಿಮಾ ವಿತರಣೆ ಮಾಡುವ ಮೂಲಕ ವಿತರಕನಾಗಿ ಸಕ್ಸಸ್ ಕಂಡವರು. ಸದ್ಯ ಸಿನಿಮಾ ಬಿಟ್ಟು ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಹೌದು, ಕುಮಾರಸ್ವಾಮಿ ಅವರು ರಾಜಕೀಯ ಜೀವನಕ್ಕೆ ಎಂಟ್ರಿ ಕೊಡುವ ಮುನ್ನ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ವಿತರಣೆ, ಸಿನಿಮಾ ಪ್ರದರ್ಶನ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕೆಲ ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಪ್ರಸ್ತುತ ಅವರ ಮಗ ನಿಖಿಲ್ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಗಾಗಿ ಬೆಳೆಯುತ್ತಿದ್ದಾರೆ. ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಖಾಸಗಿ ಹೋಟೆಲ್ನಲ್ಲಿ ಸೆಟ್ಟೇರಿರುವುದು ತಿಳಿದೇ ಇದೆ. ಕಾರ್ಯಕ್ರಮದಲ್ಲಿ ತಂದೆ ಹೆಚ್ ಡಿ ಕುಮಾಸ್ವಾಮಿ ಕೂಡ ಉಪಸ್ಥಿತರಿದ್ದರು. ಆ ವೇಳೆ ಹೆಚ್ಡಿಕೆ ಸಿನಿಮಾರಂಗದಲ್ಲಿ ನಂಟು ಹೇಗೆ ಶುರುವಾಯ್ತು ಎಂಬುದರ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಆ ಕಾಲದಲ್ಲಿ 50 ರಿಂದ 70 ರೂಪಾಯಿ ಟಿಕೆಟ್ ಪಡೆದು ಚಿತ್ರಮಂದಿಗಳಲ್ಲಿ ಸಿನಿಮಾ ನೋಡುವ ಮಜಾನೇ ಬೇರೆ. ಹೊಳೆನರಸೀಪುರದಲ್ಲಿ ಒಂದು ಚಿತ್ರಮಂದಿರ ಇತ್ತು. ನಾನು ಪ್ರತೀ ದಿನ 400 ಕಿಲೋ ಮೀಟರ್ ಪ್ರಯಾಣ ಮಾಡಬೇಕಿತ್ತು. ಆಗ ನಾನು 4 ರಿಂದ 5 ಲಕ್ಷ ರೂಪಾಯಿ ಕೊಟ್ಟು ನಮ್ಮ ಸಿನಿಮಾಗಳನ್ನು ಥಿಯೇಟರ್ಗಳಲ್ಲಿ ಹಾಕಿಸುತ್ತಿದ್ದೆ ಎಂದು ತಿಳಿಸಿದರು.
ರೆಬಲ್ ಸ್ಟಾರ್ ಅಂಬರೀಶ್ ಅವರ 'ಇಂದ್ರಜಿತ್' ನಾನು ವಿತರಣೆ ಮಾಡಿದ ಮೊದಲ ಸಿನಿಮಾ. ಆ ಕಾಲದಲ್ಲಿ ಅಂಬರೀಶ್ ಚಿತ್ರಕ್ಕೆ ಹೆಚ್ಚು ಹಣ ಕೊಟ್ಟು ನಮ್ಮ ಚಿತ್ರಮಂದಿರದಲ್ಲಿ ಹಾಕಿಸಿದ್ದೆ. ಚಿತ್ರರಂಗದಲ್ಲಿ ಪರಿಚಯ ಆದ ಮೊದಲ ನಟ ಅಂದ್ರೆ ಅದು ಅಂಬರೀಶ್ ಎಂದು ಕುಮಾರಸ್ವಾಮಿ ತಿಳಿಸಿದರು.
ಇನ್ನು, ಡಾ. ವಿಷ್ಣುವರ್ಧನ್ ಸಿನಿಮಾಗಳಿಗೆ 85 ಲಕ್ಷ ರೂ. ಬಂಡವಾಳ ಹೂಡಿದ್ರೆ, ಹಣ ವಾಪಸ್ ಬರಲ್ಲ ಎಂದು ಸಾಕಷ್ಟು ಸಿನಿಮಾ ನಿರ್ಮಾಪಕರು ಹಾಗೂ ವಿತರಕರು ಹೇಳುತ್ತಿದ್ದರು. ಆದ್ರೆ ನಾನು ಸೂರ್ಯವಂಶ ಚಿತ್ರವನ್ನು 3 ಲಕ್ಷಕ್ಕೆ ರೈಟ್ಸ್ ತಂದು ಆ ಸಿನಿಮಾ ಮಾಡಿದೆ. ಆ ಚಿತ್ರ ಆ ಕಾಲದಲ್ಲಿ ಸುಮಾರು 5 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಅನ್ನೋದನ್ನು ವಿವರಿಸಿದರು.
ಇನ್ನು ಡಾ. ರಾಜ್ಕುಮಾರ್ ಸಿನಿಮಾಗಳು ಬಹಳ ಪ್ರಭಾವ ಬೀರಿವೆ. ಅವರ ಚಿತ್ರಗಳಲ್ಲಿ ಸಾಮಾಜಿಕ ಸಂದೇಶ, ಸಂಬಂಧಗಳ ಮೌಲ್ಯಗಳು, ಬಡವರಿಗೆ ದಾನ ಮಾಡೋದು, ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವ ಅಂಶಗಳಿತ್ತು. ನಾನಿಂದು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದೇನಂದ್ರೆ ಅದಕ್ಕೆ ರಾಜ್ ಕುಮಾರ್ ಸಿನಿಮಾಗಳು ಕಾರಣ ಎಂಬ ಗುಟ್ಟನ್ನು ಹೆಚ್ಡಿಕೆ ಬಿಚ್ಚಿಟ್ಟರು.
ನನ್ನ ಮಗ ನಿಖಿಲ್‌ಗಾಗಿ ಒಂದು ಕಥೆ ರೆಡಿ ಮಾಡಿದ್ದೇನೆ. ದ್ವಿಪಾತ್ರ ಇರುವ ಕಥೆ. ನಮ್ಮ ಚೆನ್ನಾಂಬಿಕಾ ಬ್ಯಾನರ್‌ನಲ್ಲಿ ಸಿನಿಮಾ ಮಾಡುವುದಕ್ಕೆ ಈ ಕಥೆಯನ್ನು ಸಿದ್ಧ ಮಾಡಿದ್ದೇನೆ. ಪಾತ್ರಗಳು ಜನರ ಹೃದಯ ತಲುಪವುಂತಹವು. ಎಷ್ಟೇ ಕಷ್ಟವಾದರೂ ಸರಿ ನಮ್ಮ ಬ್ಯಾನರ್‌ನಿಂದಲೇ ಆ ಸಿನಿಮಾ ಮಾಡಬೇಕು ಎಂಬ ಆಸೆ ನನಗೆ ಇದೆ. ಆದರೆ ಮಗ ನಿಖಿಲ್ ಮಾತ್ರ ಒಪ್ಪುತ್ತಿಲ್ಲ ಎಂದು ತಿಳಿಸಿದರು.
ಬಹಳ ವರ್ಷಗಳ ಹಿಂದೆ ವ್ಯಾಸರಾಯ ಬಲ್ಲಾಳರ ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡಬೇಕು ಎಂದು ಪ್ರಯತ್ನಪಟ್ಟಿದ್ದೆ. ಅದಕ್ಕಾಗಿ ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ದೆ. ಅದರಲ್ಲೂ ದ್ವಿಪಾತ್ರ ಇತ್ತು. ಆದರೆ ಅದನ್ನು ಸರಿಯಾಗಿ ತೆರೆಗೆ ತರುವ ನಿರ್ದೇಶಕರು ಸಿಗಲಿಲ್ಲ. ಹಾಗಾಗಿ, ಆ ಸಿನಿಮಾ ಆಗಲಿಲ್ಲವೆಂದು ತಿಳಿಸಿದರು.
ನಿಖಿಲ್ ಕುಮಾರ್ಸ್ವಾಮಿ ಈ ಸಿನಿಮಾ ಮಾಡಲು ಒಪ್ಪದಿರುವುದರ ಹಿಂದೆ ಒಂದು ಕಾರಣ ಇದೆ. ನಾವು ಸದ್ಯ ಸಿದ್ಧಪಡಿಸಿರುವ ಕಥೆ ಈಗಿನ ಪ್ಯಾನ್ ಇಂಡಿಯಾ ಕಲ್ಚರ್‌ಗೆ ತಕ್ಕಂತೆ ಇದೆ. ಆದರೆ ನಿಖಿಲ್‌ಗೆ ಒಂದು ಭಯ ಇದೆ. ಆ ಬಗ್ಗೆ ನನಗೆ ಸ್ವತಃ ನಿಖಿಲ್ ಒಂದು ಮಾತು ಹೇಳಿದ್ದ. ನೀವು ನಿಮ್ಮ ಬ್ಯಾನರ್‌ನಿಂದ ಸಿನಿಮಾ ಮಾಡಿದರೆ, ಅಯ್ಯೋ ಬಿಡಪ್ಪ ನಿಖಿಲ್ ಕುಮಾರಸ್ವಾಮಿಗೇನ್ ಕಮ್ಮಿ. ಅವರಪ್ಪನಿಗೆ ದುಡ್ಡು ಹೆಚ್ಚಾಗಿದೆ ಅಂತಾರೆ. ನೀವು ಎಷ್ಟೇ ಕಷ್ಟಪಟ್ಟು, ಸಾಲ ಮಾಡಿ ಸಿನಿಮಾ ನಿರ್ಮಾಣ ಮಾಡಿದರೂ, ಜನರಲ್ಲಿ ಬೇರೆ ರೀತಿಯ ಅಭಿಪ್ರಾಯ ಬರಬಹುದು. ನಿಮಗೆ ಆರ್ಥಿಕ ನಷ್ಟ ಮಾಡುವುದಕ್ಕೆ ನನಗೆ ಇಷ್ಟವಿಲ್ಲ ಎಂದು ಹೇಳಿದ್ದ. ಇಲ್ಲ ಅಂದಿದ್ರೆ ಈ ಸಿನಿಮಾ ಶುರು ಮಾಡಿ ಎರಡು ತಿಂಗಳು ಆಗಿರಬೇಕಿತ್ತು. ಜಾಗ್ವಾರ್ ಸಿನಿಮಾಗೆ ಎಷ್ಟೆಲ್ಲಾ ಕಷ್ಟಪಟ್ಟಿದ್ದೇನೆ ಅನ್ನೋದು ನನಗೆ ಮಾತ್ರ ಗೊತ್ತು. ಈಗ ರೆಡಿ ಆಗಿರುವ ಕಥೆಯನ್ನು ನಾನೇ ಖುದ್ದಾಗಿ ಕುಳಿತು ರೆಡಿ ಮಾಡಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಲೈಕಾ ಪ್ರೊಡಕ್ಷನ್ಸ್ ಜೊತೆ ನಿಖಿಲ್ ಕುಮಾರಸ್ವಾಮಿ ಸಿನಿಮಾ: ಮೊಮ್ಮಗನಿಗೆ ದೇವೇಗೌಡರ ಸಾಥ್
ನಾನು ಸಿನಿಮಾಗಳನ್ನು ಪ್ರದರ್ಶನ ಮಾಡಿರುವವನು. ಜನರ ಮನಸ್ಥಿತಿ ಹೇಗಿರುತ್ತದೆ ಎಂಬುದು ನನಗೆ ತಿಳಿದಿದೆ. ಈ ಕಥೆಯನ್ನು ನಿಖಿಲ್ ಕುಮಾರಸ್ವಾಮಿಗಾಗಿಯೇ ಮಾಡಿದ್ದೇನೆ. ಅದು ಬಹಳ ಅದ್ಭುತವಾದ ಕಥೆ. ಈ ಸಿನಿಮಾವನ್ನು ಮಾಡಿದ ಮೇಲೆ ನಿಖಿಲ್ ಬೇರೆ ಸಿನಿಮಾ ಮಾಡುವುದೇ ಬೇಡ, ಇದೊಂದು ಮಾಡಿ ಬಿಡಲಿ. ಆದರೆ ನಿಖಿಲ್ ನನಗೆ ಕಾಲ್‌ಶೀಟ್ ನೀಡಲು ತಯಾರಿಲ್ಲ. ಅದು ನನ್ನ ಕನಸಿನ ಸಿನಿಮಾ. ಯುವ ನಿರ್ದೇಶಕರೊಬ್ಬರು ಅದನ್ನು ನಿರ್ದೇಶನ ಮಾಡಲಿದ್ದಾರೆ. ನಿಖಿಲ್ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದೇನೆ. ನಾನು ಸಾಲ ಮಾಡಲ್ಲ, ನಿನ್ನನ್ನೂ ಕಷ್ಟಕ್ಕೆ ಸಿಲುಕಿಸುವುದಿಲ್ಲ ಎಂದು ಮಗನಲ್ಲಿ ಹೇಳುತ್ತಿದ್ದೇನೆ. ಆದರೆ ಅವನು ಒಪ್ಪುತ್ತಿಲ್ಲ. ಮುಂದಿನ ವರ್ಷವಾದರೂ ಈ ಸಿನಿಮಾವನ್ನ ಶುರು ಮಾಡುವುದಕ್ಕೆ ಪ್ರಯತ್ನಿಸುತ್ತೇನೆ ಎಂದು ಹೆಚ್ಡಿಕೆ ಹೇಳಿದರು.