ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ ಇದೀಗ ಟಾಲಿವುಡ್ನಲ್ಲಿ ಬ್ಯುಸಿ ಆಗಿರುವ ಚೆಲುವೆ ಶ್ರೀಲೀಲಾ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಕಾರಂ'. ಇವರು ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಪ್ರಚಾರದ ಭಾಗವಾಗಿ ಚಿತ್ರ ನಿರ್ಮಾಪಕರು ಇಂದು ಚಿತ್ರದ ಮಾಸ್ ಹಾಡಿನ ಪ್ರೋಮೋ ಅನಾವರಣಗೊಳಿಸಿದ್ದಾರೆ. ಮಹೇಶ್ ಬಾಬು ಮತ್ತು ಶ್ರೀಲೀಲಾ ಅವರ ಭರ್ಜರಿ ಡ್ಯಾನ್ಸ್ ನೆಟ್ಟಿಗರ ಗಮನ ಸೆಳೆದಿದೆ. ನಾಳೆ ಕುರುಚಿ ಮಡತಪೆಟ್ಟಿ (Kurchi Madathapetti) ಹಾಡು ಬಿಡುಗಡೆಯಾಗಲಿದೆ.
ಮಹೇಶ್ ಮತ್ತು ಶ್ರೀಲೀಲಾ ಅವರನ್ನೊಳಗೊಂಡು ಈ ಹಾಡನ್ನು ಥಮನ್ ಎಸ್. ಸಂಯೋಜಿಸಿದ್ದಾರೆ. ಮಹೇಶ್ ಬಾಬು ಅವರ ಕ್ಲೋಸ್‌ಅಪ್ ಲುಕ್ನಿಂದ ಪ್ರೋಮೋ ಆರಂಭವಾಗುತ್ತದೆ. ಮುಂದಿನ ಫ್ರೇಮ್‌ನಲ್ಲಿ ಶ್ರೀಲೀಲಾ ಕೆಂಪು ಸೀರೆ ಧರಿಸಿ ಆಗಮಿಸುತ್ತಾರೆ. ಬೀಟ್ಸ್ ಹೆಚ್ಚಾದಂತೆ, ಇಬ್ಬರೂ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಪಕ್ಕಾ ಲೋಕಲ್ ಹಿನ್ನೆಲೆಯಲ್ಲಿ ಚಿತ್ರೀಕರಣವಾಗಿದೆ.
ಮೀನಾಕ್ಷಿ ಚೌಧರಿ, ಜಯರಾಮ್, ಪ್ರಕಾಶ್ ರಾಜ್ ಮತ್ತು ಸುನೀಲ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಆ್ಯಕ್ಷನ್ ಡ್ರಾಮಾ ಎಂದು ಬಿಂಬಿಸಲಾಗಿದೆ. ತ್ರಿವಿಕ್ರಮ್ ನಿರ್ದೇಶಿಸಿದ್ದಾರೆ. 2024ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ತ್ರಿವಿಕ್ರಮ್ ಬ್ಲಾಕ್‌ಬಸ್ಟರ್ ಸಿನಿಮಾಗೆ ಹೆಸರುವಾಸಿಯಾಗಿದ್ದು ಹೊಸ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ಇವರದೇ ನಿರ್ದೇಶನದ, ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ಅಭಿನಯದ ಅಲ ವೈಕುಂಠಪುರಮುಲೂ ಸೂಪರ್ ಹಿಟ್ ಆಗಿತ್ತು. ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಸಿನಿಮಾ ಕೂಡ 2020 ಸಂಕ್ರಾಂತಿ ಸಂದರ್ಭದಲ್ಲೇ ತೆರೆಕಂಡಿತ್ತು. ಬಾಕ್ಸ್ ಆಫೀಸ್ ಪೈಪೋಟಿ ಹೊರತಾಗಿಯೂ, ಎರಡೂ ಚಿತ್ರಗಳು ಜಾಗತಿಕವಾಗಿ 250 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾದವು.
ಇದನ್ನೂ ಓದಿ:ಜ.3ಕ್ಕೆ ಅಮೀರ್ ಪುತ್ರಿಯ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಇರಾ- ನೂಪುರ್
'ಗುಂಟೂರು ಕಾರಂ' ತ್ರಿವಿಕ್ರಮ್ ಮತ್ತು ಮಹೇಶ್ ಬಾಬು ಜೋಡಿಯ ಮೂರನೇ ಸಿನಿಮಾ. ಈ ಹಿಂದೆ ಯಶಸ್ವಿ ಚಿತ್ರಗಳಾದ ಅತಡು ಮತ್ತು ಖಲೇಜಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 12 ವರ್ಷಗಳ ಬ್ರೇಕ್ ಬಳಿಕ ಈ ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಮಹೇಶ್ ಬಾಬು ತಮ್ಮ ತಂದೆ, ನಟ ಕೃಷ್ಣ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭ (ಮೇ ತಿಂಗಳಲ್ಲಿ) ಅವರಿಗೆ ಗೌರವ ಸಲ್ಲಿಸಲು ಸಿನಿಮಾದ ಶೀರ್ಷಿಕೆ ಮತ್ತು ಟೀಸರ್ ಅನಾವರಣಗೊಳಿಸಿದ್ದರು. ಇದಿಗ ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸಿದ್ದು, ಹಾಡುಗಳ ಮೂಲಕ ಚಿತ್ರತಂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:2023ರಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ ಶ್ರೀಲೀಲಾ; ಗುಂಟೂರು ಕಾರಂ ರಿಲೀಸ್ಗೆ ರೆಡಿ