ಮಹೇಶ್ ಬಾಬು ಅವರ 'ಗುಂಟೂರು ಖಾರಂ' ಮತ್ತು ತೇಜ ಸಜ್ಜಾ ನಟನೆಯ 'ಹನುಮಾನ್' ಜನವರಿ 12ರ ಶುಕ್ರವಾರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಎರಡೂ ಸಿನಿಮಾಗಳು ಪ್ರೇಕ್ಷಕರು, ವಿಮರ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತಿವೆ. ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸುತ್ತಿರುವ ಈ ಸಿನಿಮಾಗಳ ಬಾಕ್ಸ್ ಆಫೀಸ್ ಅಂಕಿಅಂಶಗಳೂ ಕೂಡಾ ಉತ್ತಮವಾಗಿವೆ.
ಹನುಮಾನ್ ಕಲೆಕ್ಷನ್:ಯುವ ನಾಯಕ ತೇಜ ಸಜ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹನುಮಾನ್ ಎರಡನೇ ದಿನವೂ ಶೇ.55.65ರಷ್ಟು ಹೆಚ್ಚು ಆದಾಯ ಕಂಡಿದೆ. ಶನಿವಾರ (ಜನವರಿ 13) 12.53 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ತೆಲುಗಿನ ಹನುಮಾನ್ ಬಿಡುಗಡೆಗೂ ಮುನ್ನವೇ ಭಾರಿ ಕುತೂಹಲ ಮೂಡಿಸಿತ್ತು. ಗುರುವಾರ (ಜನವರಿ 11) ಪೇಯ್ಡ್ ಪ್ರೀಮಿಯರ್ ಶೋನಲ್ಲಿ 4.15 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ತೆರೆಕಂಡ ಮೊದಲ ದಿನ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 8.05 ಕೋಟಿ ರೂ. ಬಾಚಿಕೊಂಡಿದೆ. ಮೊದಲ ದಿನವೇ ವಿಶ್ವಾದ್ಯಂತ 10 ಕೋಟಿ ರೂ.ಗೂ ಹೆಚ್ಚಿನ ವ್ಯವಹಾರ ನಡೆಸಿದೆ ಎಂದು ಟ್ರೇಡ್ ಮೂಲಗಳು ಮಾಹಿತಿ ನೀಡಿವೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ ಕುಮಾರ್, ವಿನಯ್ ರೈ, ದೀಪಕ್ ಶೆಟ್ಟಿ, ವೆನ್ನೆಲ ಕಿಶೋರ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಗುಂಟೂರು ಖಾರಮ್ಕಲೆಕ್ಷನ್:ಮಹೇಶ್ ಬಾಬು ಮತ್ತು ಶ್ರೀಲೀಲಾ ಇದೇ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿರುವ ಗುಂಟೂರ್ ಖಾರಮ್ ಜಾಗತಿಕವಾಗಿ 127 ಕೋಟಿ ರೂ ಗಳಿಸುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ ಮೊದಲ ದಿನವೇ ವಿಶ್ವಾದ್ಯಂತ ರೂ. 94 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ವಿಚಾರವನ್ನು ಚಿತ್ರ ನಿರ್ಮಾಣ ಸಂಸ್ಥೆ ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್ ಅಧಿಕೃತವಾಗಿ ಪ್ರಕಟಿಸಿದೆ. ಇದೀಗ ಎರಡನೇ ದಿನದ ಕಲೆಕ್ಷನ್ ವಿವರವನ್ನೂ ಹಂಚಿಕೊಂಡಿದೆ. ಎರಡು ದಿನದಲ್ಲಿ ಚಿತ್ರ ವಿಶ್ವಾದ್ಯಂತ 127 ಕೋಟಿ ರೂ.ನ ವ್ಯವಹಾರ ನಡೆಸಿದೆ ಎಂದು ಪ್ರೊಡಕ್ಷನ್ ಹೌಸ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ಕೊಟ್ಟಿದೆ.
ಇದನ್ನೂ ಓದಿ:ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ನೋಡುವ ಬಯಕೆ ವ್ಯಕ್ತಪಡಿಸಿದ ಶಾರುಖ್
ಅತಡು ಮತ್ತು ಖಲೇಜಾ ನಂತರ ತ್ರಿವಿಕ್ರಮ್ ಶ್ರೀನಿವಾಸ್-ಮಹೇಶ್ ಬಾಬು ಕಾಂಬಿನೇಶನ್ನಲ್ಲಿ ತಯಾರಾದ ಮೂರನೇ ಸಿನಿಮಾ ಗುಂಟೂರು ಖಾರಮ್. ಸರಿಸುಮಾರು 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ರಾಧಾಕೃಷ್ಣ ಚಿತ್ರ ನಿರ್ಮಿಸಿದ್ದಾರೆ. ತಮನ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸಿದ್ದಾರೆ. ಪ್ರಕಾಶ್ ರಾಜ್, ಜಗಪತಿ ಬಾಬು, ಜಯರಾಮ್ ಮತ್ತು ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:'ಗಜರಾಮ' ಟೀಸರ್ ನೋಡಿ: ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಸಿನಿಮಾ ಮೇಲೆ ಕುತೂಹಲ