ಗೋವಾ ಸರ್ಕಾರ, ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ ಮತ್ತು ಎನ್.ಎಫ್.ಡಿ.ಸಿ ಇಂಡಿಯಾ ಜಂಟಿಯಾಗಿ ಗೋವಾದ ಪಣಜಿಯಲ್ಲಿ ಆಯೋಜಿಸಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFI) ಕನ್ನಡದ 'ಗ್ರೇ ಗೇಮ್ಸ್' ಚಿತ್ರ ಆಯ್ಕೆ ಆಗಿದೆ. ವಿಜಯ್ ರಾಘವೇಂದ್ರ, ಭಾವನಾ ರಾವ್, ಶ್ರುತಿ ಪ್ರಕಾಶ್, ಅಪರ್ಣ ವಸ್ತಾರೆ, ಜೈ ಸೇರಿದಂತೆ ಹಲವರು ನಟಿಸಿರುವ ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ್ ನಿರ್ದೇಶಿಸಿದ್ದಾರೆ.
ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ 'ಗ್ರೇ ಗೇಮ್ಸ್' ಸಿನಿಮಾ ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ರೆಡ್ ಕಾರ್ಪೆಟ್ ಗಾಲ ಪ್ರೀಮಿಯರ್' ವಿಭಾಗದಡಿ ಮೊದಲ ಪ್ರದರ್ಶನ ಕಾಣುತ್ತಿದೆ. ಈ ವಿಭಾಗದಲ್ಲಿ ಭಾರತದ ಹಲವು ಚಿತ್ರಗಳು ಪ್ರೀಮಿಯರ್ ಆಗುತ್ತಿದ್ದು, ಈ ಪೈಕಿ ಕನ್ನಡದ 'ಗ್ರೇ ಗೇಮ್ಸ್' ಸಹ ಒಂದಾಗಿರುವುದು ವಿಶೇಷ.
ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟ ವಿಜಯ್ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್ ಈ ಚಿತ್ರದಲ್ಲಿ ಓರ್ವ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಜೈ (ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಸಹೋದರಿ ಪುತ್ರ) ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಲವು ರೋಚಕ ತಿರುವುಗಳಿರುವ ಈ ಚಿತ್ರ, ಅಷ್ಟೇ ಭಾವನಾತ್ಮಕವಾಗಿ ಮೂಡಿಬಂದಿದೆ.
ಗೋವಾ ಚಿತ್ರೋತ್ಸವಕ್ಕೆ ಚಿತ್ರ ಆಯ್ಕೆಯಾಗಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ನಿರ್ದೇಶಕ ಗಂಗಾಧರ್ ಸಾಲಿಮಠ್, ''ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಆಗಿದ್ದು, ವರ್ಚುವಲ್ ಮತ್ತು ನೈಜತೆ ನಡುವೆ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ದೃಷ್ಟಿಕೋನಕ್ಕೆ ಸವಾಲು ಎಸೆಯುವಂತಿದೆ. ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಅವರ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಖಂಡಿತ ಇದೆ'' ಎಂದು ತಿಳಿಸಿದ್ದಾರೆ.