ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ಗೆ ಹೆಚ್ಚು ಮಹತ್ವ ಕೊಡಲಾಗುತ್ತಿದೆ. ಹೊಸ ಬಗೆಯ ಕಥೆಗಳು ಮೂಡಿ ಬರುತ್ತಿವೆ. ಪ್ರೇಕ್ಷಕರ ಸದಭಿರುಚಿಗೆ ತಕ್ಕಂತ ಸಿನಿಮಾ, ಕಿರುಚಿತ್ರ, ಸಾಕ್ಷ್ಯ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ಕೇವಲ ಬಿಗ್ ಸ್ಕ್ರೀನ್ನಲ್ಲಿ ಬರುವ ಸಿನಿಮಾಗಳು ಮಾತ್ರವಲ್ಲದೇ ಕಿರುಚಿತ್ರ, ಸಾಕ್ಷ್ಯ ಚಿತ್ರಗಳು ಸಹ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಒಂದೊಳ್ಳೆ ಕಥೆ, ಸಂದೇಶ ಅದರಲ್ಲಿರುತ್ತವೆ ಅನ್ನೋದರಲ್ಲಿ ಯಾವುದೇ ಸಂದೇಹ ಇಲ್ಲ. ಇದೀಗ ಸಾಕ್ಷ್ಯಚಿತ್ರವೊಂದು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ.
ಕನ್ನಡದ ಸಾಕ್ಷ್ಯಚಿತ್ರಕ್ಕೆ ಗ್ರೀನ್ ಆಸ್ಕರ್: ಕುಂಬಾರ ಕಪ್ಪೆ ಕುರಿತು ನಿರ್ಮಾಣ ಆಗಿರುವ ಸಾಕ್ಷ್ಯಚಿತ್ರ 'ಕಪ್ಪೆರಾಗ'ಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದೀಗ ಜಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿಯನ್ನು ಈ ಸಾಕ್ಷ್ಯಚಿತ್ರ ಮುಡಿಗೇರಿಸಿಕೊಂಡಿದೆ. ಜಾಕ್ಸನ್ ವೈಲ್ಡ್ ಮೀಡಿಯಾ ಅವಾರ್ಡ್, ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿ. ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಕೂಡ ಹೌದು.
ಅಭಿನಂದನೆ ತಿಳಿಸಿದ ಸಿಎಂ ಸಿದ್ದರಾಮಯ್ಯ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ''ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್‌ಗೆ ಭಾಜನವಾಗಿರುವ ಕನ್ನಡದ ಮೊದಲ 'ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ' ಕಪ್ಪೆರಾಗ ತಂಡಕ್ಕೆ ಅಭಿನಂದನೆಗಳು. ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾಗಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ನಂತಹ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ. ಚಿತ್ರದ ನಿರ್ದೇಶಕ ಪ್ರಶಾಂತ್ ಎಸ್. ನಾಯ್ಕ ಮತ್ತು ಅವರ ತಂಡದ ಸಾಧನೆ ನಾಡಿನ ಯುವ ನಿರ್ದೇಶಕರಿಗೆ ಪ್ರೇರಣೆಯಾಗಲಿ. ಇಂಥ ಇನ್ನಷ್ಟು ಚಿತ್ರಗಳು ನಮ್ಮಲ್ಲಿ ಮೂಡಿಬಂದು, ಕನ್ನಡದ ಕಲರವ ಜಗದಗಲ ಮೊಳಗಲಿ ಎಂದು ಹಾರೈಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.