ಹಿಂದಿ ಚಿತ್ರರಂಗದ ನಟ ಗೋವಿಂದ ಅವರೇ ಮಾಡಿದ್ದಾರೆ ಎನ್ನಲಾಗಿದ್ದ ಹರಿಯಾಣ ಸಂಘರ್ಷದ ಟ್ವೀಟ್ ಭಾರಿ ಆಕ್ರೋಶ ಎದುರಿಸಿತ್ತು. ಆಗಸ್ಟ್ 2 ರಂದು ಪೊಸ್ಟ್ ಮಾಡಲಾಗಿದ್ದ, ಬಳಿಕ ಡಿಲೀಟ್ ಮಾಡಿದ್ದ ಟ್ವೀಟ್ ಹರಿಯಾಣ ರಾಜ್ಯದ ಗುರುಗ್ರಾಮ್ನ ಹಿಂಸಾಂಚಾರದ ವಿಷಯವನ್ನು ಪ್ರಸ್ತಾಪಿಸಿತ್ತು. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ನಟ ಭಾರಿ ಟೀಕೆಗಳನ್ನು ಸ್ವೀಕರಿಸಿದ್ದರು.
ನಟ ಗೋವಿಂದ ಹೆಸರಲ್ಲಿ ಬಂದಿತ್ತು ಟ್ವೀಟ್ : ಈ ಹಿಂದೆ ನಟ ಗೋವಿಂದ ಹೆಸರಲ್ಲಿ ಮಾಡಲಾಗಿದ್ದ ಟ್ವೀಟ್ನಲ್ಲಿ ಹರಿಯಾಣ ಹಿಂಸಾಚಾರ ಪ್ರಕರಣದ ಬಗ್ಗೆ ಅಸಮಧಾನ ವ್ಯಕ್ತಪಡಿಸಲಾಗಿತ್ತು. ಶಾಂತಿ ಮತ್ತು ಏಕತೆಯನ್ನು ಟ್ವೀಟ್ನಲ್ಲಿ ಪ್ರತಿಪಾದಿಸಿದ್ದರು. ಟ್ವೀಟ್ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಯಿತು. ಈ ಟ್ವೀಟ್ ಬಾಲಿವುಡ್ ನಟ ಗೋವಿಂದ ಹೆಸರಲ್ಲಿ ಬಂದಿತ್ತು. ಇದೀಗ ನಟ ತಮ್ಮ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಹರಿಯಾಣ ಸಂಘರ್ಷ ಕುರಿತ ಟ್ವೀಟ್:ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆ ಹಿನ್ನೆಲೆಯಲ್ಲಿ ನಟನ ಹೆಸರಿನಿಂದ ಟ್ವೀಟ್ ಬಂದಿತ್ತು. ಗೋವಿಂದ ಅವರೇ ಮಾಡಿದ್ದಾರೆ ಎನ್ನುವ ಟ್ಟೀಟ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿದಂತಿತ್ತು. ಗಲಭೆ ಕುರಿತು ಗೋವಿಂದ ಹೆಸರಿನಿಂದ ಬಂದಿದ್ದ ಟ್ವೀಟ್ ಕಿಡಿಕಾರಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಆ ಟ್ವೀಟ್ ಅನ್ನು ನಾನು ಮಾಡಿಲ್ಲ ಎಂದು ನಟ ಸ್ಪಷ್ಟಪಡಿಸಿದ್ದಾರೆ.