ಬಹು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಬೇಡಿಕೆ ನಟ ಗೋಲ್ಡನ್ ಸ್ಟಾರ್ ಗಣೇಶ್. ಕಿರುತೆರೆಯಲ್ಲೇ ಕಾಮಿಡಿ ಟೈಮ್ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದ ಇವರು ಹಿರಿತೆರೆಯಲ್ಲೂ ಮೋಡಿ ಮಾಡಿ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ನಗು ಮೊಗದ ನಟ ಗಣೇಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಮುಂದಿನ ಮತ್ತೊಂದು ಸಿನಿಮಾ ಘೋಷಣೆ ಆಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು, ಸ್ನೇಹಿತರು, ಸಿನಿ ಉದ್ಯಮದ ಸಹುದ್ಯೋಗಿಗಳೂ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಸಂದೇಶ ಹರಿದುಬರುತ್ತಿದೆ. ನಟ ಗಣೇಶ್ ಅವರಿಗೆ ಈ ಸಾಲಿನ ಹುಟ್ಟುಹಬ್ಬ ವಿಶೇಷ ಅಂತಾನೇ ಹೇಳಬಹುದು. ಏಕೆ ಅಂತೀರಾ?. ನಿನ್ನೆಯಷ್ಟೇ ನಟನ ಮುಂದಿನ ಸಿನಿಮಾ ಘೋಷಣೆ ಆಗಿ ಪೋಸ್ಟರ್ ಬಿಡುಗಡೆ ಆಯಿತು. ಇಂದು ಆ ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ ಆಯಿತು. ಇದರ ಬೆನ್ನಲ್ಲೇ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಈ ಹಿನ್ನೆಲೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
43ನೇ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವ ಕನ್ನಡ ಚಿತ್ರರಂಗದ ಗಣಿ ಅವರ 42ನೇ ಸಿನಿಮಾ ಘೋಷಣೆ ಆಗಿದೆ. ಸ್ವತಃ ನಟ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಪೋಸ್ಟ್ ಶೇರ್ ಮಾಡಿದ್ದಾರೆ. ವಿಖ್ಯಾತ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. #GOLDENSTAR42 ಎಂದು ಬರೆದಿರುವ ಪೋಸ್ಟರ್ ನೋಡುಗರ ಗಮನ ಸೆಳೆದಿದೆ. ಮತ್ತೊಂದು ಗಮನಾರ್ಹ ವಿಷಯವೆಂದರೆ ಇದು ಪ್ಯಾನ್ ಇಂಡಿಯಾ ಸಿನಿಮಾವಂತೆ. ಬಹುಭಾಷೆಗಳಲ್ಲಿ ಬಿಗ್ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ ಎಂಬ ವರದಿಗಳಿದ್ದು, ಸಿನಿಮಾಗೆ ಸಂಬಂಧಿಸಿದ ಹೆಚ್ಚಿನ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.