ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ 'ಬಾನದಾರಿಯಲಿ' ಸಿನಿಮಾ ರಾಜ್ಯಾದ್ಯಂತ ಇಂದು ತೆರೆಕಂಡಿದೆ. ಪ್ರೇಕ್ಷಕರು ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಡುಗಡೆಗೂ ಮುನ್ನ ಬಾನದಾರಿಯಲ್ಲಿ ಚಿತ್ರತಂಡವು ಕನ್ನಡದ ತಾರೆಯರಿಗಾಗಿ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಆಗಮಿಸಿ ಚಿತ್ರತಂಡಕ್ಕೆ ಸಪೋರ್ಟ್ ಮಾಡಿದ್ದರು. ಸದ್ಯ ಸಿನಿಮಾ ಕುರಿತು ಪ್ರೇಕ್ಷಕರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ಎಷ್ಟರ ಮಟ್ಟಿಗೆ ಸಿನಿಮಾ ಗೆಲ್ಲಲಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.
ಬಾನದಾರಿಯಲಿ ಸ್ಪೆಷಲ್ ಸ್ಕ್ರೀನಿಂಗ್:ಲವರ್ ಬಾಯ್ ಇಮೇಜ್ನಿಂದಲೇ ಕನ್ನಡಿಗರ ಮನಗೆದ್ದಿರುವ ಗಣೇಶ್ 'ಬಾನದಾರಿಯಲಿ' ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣಿಯ ಬಾನದಾರಿಯಲಿ ಸ್ಪೆಷಲ್ ಸ್ಕ್ರೀನಿಂಗ್ಗೆ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ, ಅನೂಪ್ ಭಂಡಾರಿ, ಸಪ್ತಮಿ ಗೌಡ, ಕೃಷಿ ತಾಪಂಡ, ಚೈತ್ರಾ ಆಚಾರ್ಯ, ಡಾರ್ಲಿಂಗ್ ಕೃಷ್ಣ, ನಿರೂಪ್ ಭಂಡಾರಿ, ವಿಕ್ರಮ್ ರವಿಚಂದ್ರನ್, ಧೀರೆನ್ ರಾಮ್ ಕುಮಾರ್, ಅಮೂಲ್ಯ ದಂಪತಿ ಸಾಕ್ಷಿಯಾಗಿದ್ದರು. ನಾಯಕ ನಟ ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ, ನಿರ್ದೇಶಕ ಪ್ರೀತಂ ಗುಬ್ಬಿ ಸೇರಿದಂತೆ ಇಡೀ ಬಾನದಾರಿಯಲಿ ಚಿತ್ರತಂಡ ಉಪಸ್ಥಿತವಿತ್ತು.
ಪ್ರೀತಿಯ ಕುರಿತಾದ ಕಥೆ:ಇದೊಂದು ಪ್ರೇಮಕಥೆಯಲ್ಲ, ಪ್ರೀತಿಯ ಕುರಿತಾದ ಕಥೆ ಎಂದು ನಟ ಗಣೇಶ್ ಈ ಮೊದಲೇ ಹೇಳಿಕೊಂಡಿದ್ದರು. ಅವರ ಮಾತು ಅಪ್ಪಟ ನಿಜ. ಇಲ್ಲಿ ಕೇವಲ ಯುವಕ ಯುವತಿಯ ಪ್ರೇಮಕಥೆಯಿಲ್ಲ. ಅಪ್ಪ-ಮಗಳ ಪ್ರೀತಿ, ಮನುಷ್ಯರ ನಡುವಿನ ಪ್ರೀತಿ, ಪರಿಸರದ ಬಗೆಗಿನ ಪ್ರೀತಿ, ಜೀವನ ಕುರಿತಾದ ಪ್ರೀತಿಯ ಮಿಶ್ರಣವಿದೆ. ಈವರೆಗೂ ಬರೀ ಪ್ರೇಮಿಗಳ ಪ್ರೀತಿಯ ಬಗ್ಗೆಯೇ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಪ್ರೀತಂ ಗುಬ್ಬಿ ಈ ಬಾರಿ ಸಂಪೂರ್ಣ ಜೀವನದಲ್ಲಿ ಬರುವ ಪ್ರೀತಿಯ ಕುರಿತಾದ ಚಿತ್ರವನ್ನು ತೆರೆ ಮೇಲೆ ತಂದಿದ್ದಾರೆ.