ಕಳೆದ ಶುಕ್ರವಾರ ಸಂಜೆ (31-3-2023) ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಜಿಯೋ ವರ್ಲ್ಡ್ ಗಾರ್ಡನ್ಸ್ನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್ಎಂಎಸಿಸಿ) ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಅಂಬಾನಿ ಕುಟುಂಬ ಮೂರು ದಿನಗಳ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದು, ಸಮಾರಂಭದಲ್ಲಿ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿ ಆಗಿದ್ದರು. ಸಮಾರಂಭದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಅಮೆರಿಕನ್ ಸೂಪರ್ ಮಾಡೆಲ್ ಗಿಗಿ ಹಡಿದ್ (Gigi Hadid) ಅವರೂ ಕೂಡ ಕಳೆದ ವಾರಾಂತ್ಯ ಇತರೆ ಅತಿಥಿಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸ್ಟಾರ್ ನಟ ನಟಿಯರು ಹೆಜ್ಜೆ ಹಾಕಿ ಈ ಸಮಾರಂಭದ ಮೆರುಗು ಹೆಚ್ಚಿಸಿದ್ದರು. ಅದರಂತೆ ಬಾಲಿವುಡ್ ನಟ ವರುಣ್ ಧವನ್ ಸಹ ಭರ್ಜರಿ ಸ್ಟೆಪ್ ಹಾಕಿದ್ದರು. ತಮ್ಮ ನೃತ್ಯ ಪ್ರದರ್ಶನದ ವೇಳೆ ಮಾಡೆಲ್ ಗಿಗಿ ಹಡಿದ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದ ನಟ ಅವರನ್ನು ಎತ್ತಿ, ಅವರ ಕೆನ್ನೆಗೆ ಮುತ್ತಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುವುದರ ಜೊತೆಗೆ ಭಾರಿ ಟೀಕೆಯನ್ನು ಎದುರಿಸಿತ್ತು. ನಟನ ವಿರುದ್ಧ ಕೆಲ ನೆಟ್ಟಿಗರು ಅಸಮಧಾನ ಹೊರಹಾಕಿ ಟ್ರೋಲ್ ಮಾಡಿದ್ದರು.
ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿದ ನಂತರ ನಟ ವರುಣ್ ಧವನ್, ಇದು ಯೋಜಿತ ಎಂದು ಹೇಳಿದ್ದರು. ಮೊದಲೇ ಪ್ಲಾನ್ ಮಾಡಿ ಹಾಗೆ ಮಾಡಿದೆವು ಎಂದು ಸ್ಪಷ್ಟಪಡಿಸಿದ್ದರು. ಮಾಡೆಲ್ ಗಿಗಿ ಹಡಿದ್ ಕೂಡ ನಟನ ಪರ ನಿಂತರು. ತಮ್ಮ ಬಾಲಿವುಡ್ ಕನಸುಗಳನ್ನು ಪೂರೈಸಲು ಅವಕಾಶ ಸಿಕ್ಕಿತು ಎಂದು ತಮ್ಮ ಇನ್ಸ್ಟಾ ಸ್ಟೋರಿನಲ್ಲಿ ತಿಳಿಸಿದ್ದರು. ಆದರೆ ಆ ನಿರ್ದಿಷ್ಟ ಇನ್‌ಸ್ಟಾಗ್ರಾಮ್ ಸ್ಟೋರಿ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಕೆಲ ಸಮಯದ ಮೊದಲೇ ಅವರು ಅದನ್ನು ಡಿಲೀಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿ 24 ಗಂಟೆಗಳ ಕಾಲ ಇರುತ್ತದೆ. ಆದ್ರೆ ಗಿಗಿ ಹಡಿದ್ ಅದನ್ನು ಮೊದಲೇ ಡಿಲೀಟ್ ಮಾಡುವ ಮೂಲಕ ನೆಟ್ಟಿಗರ ಟೀಕೆಗೆ ಆಹ್ವಾನ ಕೊಟ್ಟಿದ್ದಾರೆ.