ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ಶ್ರೀನಿ ಜೋಡಿಯ 'ಘೋಸ್ಟ್' ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಅಕ್ಟೋಬರ್ 19 ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಂಡಿತ್ತು. ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ 'ಘೋಸ್ಟ್' ಓಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಜೀ5ನಲ್ಲಿ ನವೆಂಬರ್ 17 ರಿಂದ 'ಘೋಸ್ಟ್' ವೀಕ್ಷಿಸಬಹುದಾಗಿದೆ. ಈ ಸಂಬಂಧ ಚಿತ್ರತಂಡ ಸ್ಪೆಷಲ್ ಪ್ರೋಮೋ ಬಿಡುಗಡೆ ಮಾಡಿದೆ.
ಪ್ರೋಮೋದಲ್ಲೇನಿದೆ?: ಇಲಿಯೊಂದು ಬಾಯಲ್ಲಿ ಚೀಟಿ ಹಿಡಿದು ಬಂದಿದೆ. ಅದನ್ನು ಇಲಿ ಶಿವಣ್ಣನ ಕೈಗೆ ಇಟ್ಟಿದೆ. ಆ ಚೀಟಿಯ ಹಿಂಭಾಗದಲ್ಲಿ ಬೆಂಕಿ ಹಿಡಿದು ಶಿವರಾಜ್ಕುಮಾರ್ ಅವರು ನೋಡಿದಾಗ ಅದರಲ್ಲಿ ಒಂದು ಮೆಸೇಜ್ ಕಂಡಿದೆ. ಅದನ್ನು ನೋಡಿ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ. ಅಷ್ಟಕ್ಕೂ ಆ ಮೆಸೇಜ್ ಏನೆಂದರೆ, ಘೋಸ್ಟ್ ಚಿತ್ರವು ಜೀ5ನಲ್ಲಿ ನವೆಂಬರ್ 17 ರಿಂದ ನೋಡಬಹುದು ಎಂಬುದಾಗಿದೆ. 'ನನ್ನ ಗ್ಯಾಂಗ್ ಅಲ್ಲಿ ಇರೋ ಇನ್ಫಾರ್ಮರ್ ಒಬ್ರು, ನಿಮಗೆ ಒಂದು ಮೆಸೇಜ್ ಕೊಟ್ಟಿದ್ದಾರೆ. ಏನು ಅಂತ ಗೊತ್ತಾಯ್ತು ಅಲ್ವಾ?' ಎನ್ನುವ ಶೀರ್ಷಿಕೆ ಕೊಟ್ಟಿದ್ದು, ಇದು ಸಖತ್ ವೈರಲ್ ಆಗಿದೆ.
ಟೀಸರ್, ಟ್ರೇಲರ್ನಿಂದ ಕ್ರೇಜ್ ಹುಟ್ಟಿಸಿದ್ದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟಿ ಲೆಕ್ಕಾಚಾರದಲ್ಲಿ ವ್ಯವಹಾರ ನಡೆಸಿತ್ತು. ಹಿಂದಿ ಸ್ಯಾಟ್ಲೈಟ್ ಹಾಗೂ ಡಿಜಿಟಲ್ ಮತ್ತು ಡಬ್ಬಿಂಗ್ ರೈಟ್ಸ್ 15 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. 'ಘೋಸ್ಟ್' ಪ್ರಚಾರದ ಸಲುವಾಗಿ ಶಿವಣ್ಣ ಮುಂಬೈ, ದೆಹಲಿ ಮುಂತಾದೆಡೆ ತೆರಳುತ್ತಿದ್ದರು. ಚಿತ್ರ ಬಿಡುಗಡೆಯಾಗಿ 25 ದಿನವಾದರೂ ಇಂದಿಗೂ ಥಿಯೇಟರ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ:ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ: 'ಘೋಸ್ಟ್' ಮಾಹಿತಿ ಹಂಚಿಕೊಂಡ ಶಿವರಾಜ್ಕುಮಾರ್
'ಘೋಸ್ಟ್' ಹೇಗಿದೆ?: 'ಬೀರ್ಬಲ್', 'ಓಲ್ಡ್ ಮಾಂಕ್'ನಂತಹ ಸಿನಿಮಾಗಳನ್ನು ನೀಡಿರುವ ಸ್ಯಾಂಡಲ್ವುಡ್ ಭರವಸೆ ನಿರ್ದೇಶಕ ಶ್ರೀನಿ ಸಿನಿಮಾ ಮೇಕಿಂಗ್ನಲ್ಲಿ ಗೆದ್ದು, ಚಿತ್ರದ ಕಥೆ ಹೇಳುವುದರಲ್ಲಿ ಸೋತಿದ್ದಾರೆ. 'ಘೋಸ್ಟ್' ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಹಿನ್ನೆಲೆ ಸಂಗೀತ. ಶಿವಣ್ಣ ಯಂಗ್ ಮ್ಯಾನ್ ಲುಕ್ನಲ್ಲಿ ಅಬ್ಬರಿಸಿದ್ದಾರೆ. ಮಲಯಾಳಂ ನಟ ಜಯರಾಮ್ ಜೊತೆಗೆ ಶಿವಣ್ಣನ ಹಾವು - ಏಣಿ ಆಟ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇದರ ಜೊತೆಗೆ 'ಘೋಸ್ಟ್' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ಶಿವಣ್ಣನ ಯಂಗ್ ಲುಕ್ ಎಂಟ್ರಿ ನಿಜಕ್ಕೂ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ.
'ಘೋಸ್ಟ್' ಒಂದು ಜೈಲ್ ಹೈಜಾಕ್ ಮಾಡುವ ಕಥೆ. ವಯಸ್ಸು ಅರವತ್ತು ಪ್ಲಸ್ ಆದರೂ ಶಿವಣ್ಣನ ಎಂಟ್ರಿ ಸೀನ್ನಲ್ಲಿ ಅವರ ಎನರ್ಜಿ, ಕಣ್ಣಿನಲ್ಲೇ ಭಯ ಹುಟ್ಟಿಸುವ ಆ ಟೆರರ್ ಲುಕ್ಗೆ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಜೋರಾಗಿಯೇ ಬಿದ್ದಿದೆ. ಶಿವಣ್ಣ ಯಾಕೆ ಜೈಲ್ ಅನ್ನು ಹೈಜಾಕ್ ಮಾಡಿದ್ರು? ಈ ಹೈಜಾಕ್ ಹಿಂದಿರೋ ಐಡಿಯಾ ಏನು? ಹಣಕ್ಕಾಗಿ ಮಾಡಿದ್ರಾ ಅಥವಾ ವೈಯಕ್ತಿಕ ಕಾರಣಕ್ಕಾ? ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕು ಎಂದರೆ ನೀವು ಕೂಡ 'ಘೋಸ್ಟ್' ಸಿನಿಮಾವನ್ನು ನೋಡಲೇಬೇಕು.
ಚಿತ್ರತಂಡ:ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಐದು ಸಾಹಸ ಸನ್ನಿವೇಶಗಳಿವೆ. ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಅರ್ಚನಾ ಜೋಯಿಸ್ ಮುಂತಾದವರು ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ ಅರ್ಪಿಸುತ್ತಿರುವ ಸಿನಿಮಾಗೆ ಸಂದೇಶ್ ಎನ್ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ:ಪರಭಾಷಾ ಚಿತ್ರಗಳಿಗೆ ದುಬಾರಿ ಟಿಕೆಟ್ ದರ: ನಟ ಶಿವ ರಾಜ್‌ಕುಮಾರ್ ಹೇಳಿದ್ದೇನು?- ವಿಡಿಯೋ