ಜನಪ್ರಿಯ ನಟ ಅಮಿತಾಭ್ ಬಚ್ಚನ್ ಪುತ್ರ, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ ಸೈಯಾಮಿ ಖೇರ್ ನಟನೆಯ ಘೂಮರ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಹಿನ್ನಡೆ ಕಂಡಿದೆ. ಕಥೆ ಮತ್ತು ಪಾತ್ರಧಾರಿಗಳ ನಟನೆ ಸಿನಿಪ್ರಿಯರಿಂದ ಸಾಕಷ್ಟು ಪ್ರಶಂಸೆ ಗಳಿಸಿದರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಪ್ರದರ್ಶನ ಉತ್ತಮವಾಗಿಲ್ಲ. ಗೆಲುವಿನ ನಿರೀಕ್ಷೆಯಲ್ಲಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪತಿಗೆ ನಿರಾಶೆ ಆಗಿದೆ.
ಅತಿ ಕಡಿಮೆ ಸಂಪಾದನೆ: ಸಿನಿ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಸ್ಫೂರ್ತಿದಾಯಕ ಕ್ರಿಡಾ ಕಥೆ ಆಗಸ್ಟ್ 18 ರಂದು ತೆರೆಕಂಡಿದೆ. ಮೊದಲ ಸೋಮವಾರ ಕೇವಲ 34 ಲಕ್ಷ ರೂಪಾಯಿ ಸಂಪಾದನೆ ಮಾಡಿದೆ. ಇದು ಬಿಡುಗಡೆ ಆದ ಬಳಿಕ ದೇಶೀಯ ಬಾಕ್ಸ್ ಆಫೀಸ್ನಲ್ಲಿ ಘೂಮರ್ನ ಅತಿ ಕಡಿಮೆ ಅಂಕಿ ಅಂಶ ಆಗಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಚಿತ್ರತಂಡಕ್ಕೆ ಈ ಸಂಖ್ಯೆ ಆಘಾತ ನೀಡಿದೆ.
ಘೂಮರ್ ಒಟ್ಟು ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಆರ್ ಬಾಲ್ಕಿ ಆ್ಯಕ್ಷನ್ ಕಟ್ ಹೇಳಿರುವ ಘೂಮರ್ ಸಿನಿಮಾ ಬಿಡುಗಡೆ ಆದ ಮೊದಲ ದಿನ ಅಂದರೆ ಶುಕ್ರವಾರ ಕೇವಲ 85 ಲಕ್ಷ ರೂಪಾಯಿ ಗಳಿಸಿತು. ಬಳಿಕ ಶನಿವಾರ ಮತ್ತು ಭಾನುವಾರ ಕ್ರಮವಾಗಿ 1.1 ಕೋಟಿ ರೂ., 1.5 ಕೋಟಿ ರೂ. ವ್ಯವಹಾರ ನಡೆಸಿತು. ವಾರಾಂತ್ಯ ಆದರೂ ಸಿನಿಮಾ ಗೆಲುವಿಗೆ ಬೇಕಾದ ಮಿನಿಮಮ್ ಸಂಪಾದನೆ ಕೂಡ ಮಾಡಲಿಲ್ಲ. ಸಿನಿಮಾ ತೆರೆಕಂಡ ನಾಲ್ಕನೇ ದಿನ ಅಂದರೆ ಮೊದಲ ಸೋಮವಾರದಂದು ಭಾರತೀಯ ಬಾಕ್ಸ್ ಆಫೀಸ್ನಲ್ಲಿ 34 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಇದು ಈವರೆಗಿನ ಅಂತಿ ಕಡಿಮೆ ಅಂಕಿ - ಅಂಶ ಆಗಿದೆ. ಸಿನಿಮಾ ಶೇ. 77.33 ರಷ್ಟು ಕುಸಿತ ಕಂಡಿದೆ. ಈವರೆಗೆ ಚಿತ್ರ ಒಟ್ಟು 3.79 ರೂಪಾಯಿ ಕಲೆಕ್ಷನ್ ಮಾಡಿದೆ. ಆರಂಭಿಕ ಅಂದಾಜಿನ ಪ್ರಕಾರ ಸಿನಿಮಾ ಮೊದಲ ಮಂಗಳವಾರ (ಇಂದು) 40 ಲಕ್ಷ ರೂಪಾಯಿ ಗಳಿಸುವ ಸಾಧ್ಯತೆ ಇದೆ.