ಕಿರುತೆರೆ ಕಲಾವಿದರು ಸಿನಿಮಾ ಮೂಲಕ ಬಿಗ್ ಸ್ಕ್ರೀನ್ಗೆ ಪದಾರ್ಪಣೆ ಮಾಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಬ್ರಹ್ಮಗಂಟು ಸೀರಿಯಲ್ನಿಂದ ಕನ್ನಡಿಗರ ಮನಗೆದ್ದಿದ್ದ ಗೀತಾ ಭಾರತಿ ಭಟ್ ಹೆಸರಿಡದ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ಹೋಮ್ ಸ್ಟೇ ಚಿತ್ರವನ್ನ ನಿರ್ದೇಶನ ಮಾಡಿದ್ದ ಸಂತೋಷ್ ಕೊಡಂಕೇರಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಪ್ರೊಡಕ್ಷನ್ ನಂ 02 ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಸುಳ್ಯದ ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ಜರುಗಿತು.
ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು. ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪ್ರಶಸ್ತಿ ಪುರುಸ್ಕೃತ ಗಿರೀಶ್ ಭಾರಧ್ವಾಜ್ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಹಾಗೂ ಜೆಡಿಎಸ್ ರಾಜ್ಯ ಸಂಚಾಲಕ ಎಂ.ಬಿ. ಸದಾಶಿವ, ಚನ್ನಕೇಶವ ದೇವಳದ ಆಡಳಿತ ಮೊಕೇಸ್ತರ ಡಾ. ಹರಪ್ರಸಾದ್ ತುದಿಯಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಂ. ವೆಂಕಪ್ಪಗೌಡ ಹಾಗೂ ಸ್ಥಳೀಯ ಮುಖಂಡರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಗೀತಾ ಭಾರತಿ ಭಟ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ್, ಖುಷಿ ಆಚಾರ್, ಮೀನಾ ಹಾಗೂ ದರ್ಶಿನಿ ಮುಂತಾದವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.