ಕನ್ನಡದ ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ ಹಾಗೂ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. 'ಗೌರಿ' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇದೀಗ ಚಿತ್ರತಂಡ ಸಮರ್ಜಿತ್ ಲಂಕೇಶ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ ಸಮರ್ಜಿತ್ ಅವರ ಅಜ್ಜಿ, ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್, ತಾಯಿ ಅರ್ಪಿತಾ ಲಂಕೇಶ್, ಇಂದ್ರಜಿತ್ ಲಂಕೇಶ್, ನಾಯಕಿ ಸಾನ್ಯ ಅಯ್ಯರ್, ನಟಿಯರಾದ ಮಾನಸಿ ಸುಧೀರ್, ಎಸ್ತರ ನರೋನ, ಹಿರಿಯ ಛಾಯಾಗ್ರಾಹಕ ಕೆ.ಕೆ ಉಪಸ್ಥಿತರಿದ್ದರು.
ಈ ವೇಳೆ ಮೊದಲು ಮಾತು ಶುರು ಮಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, "ಗೌರಿ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈಗಾಗಲೇ ಚಿಕ್ಕಮಗಳೂರಿನ ರಮಣೀಯ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ಸಮರ್ಜಿತ್ ನಾನು ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಕೆ.ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದು ಅವರ ನೂರನೇ ಚಿತ್ರ" ಎಂದು ತಿಳಿಸಿದರು.
ಇದನ್ನೂ ಓದಿ:ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ಅದ್ಧೂರಿ ಮುಹೂರ್ತ: ಸ್ಯಾಂಡಲ್ವುಡ್ಗೆ ಮತ್ತೋರ್ವ ಆರಡಿ ಹೀರೋ ಎಂಟ್ರಿ