'ಗರಡಿ' ಹೆಸರು ಕೇಳುತ್ತಿದ್ದಂತೆ ಸ್ಯಾಂಡಲ್ವುಡ್ ವಿಕಟ ಕವಿ ಯೋಗರಾಜ್ ಭಟ್ ನೆನಪಾಗುತ್ತಾರೆ. ಅಪ್ಪಟ ದೇಸಿ ಕ್ರೀಡೆಯಾಗಿರುವ ಗರಡಿ ಕುರಿತ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿರುದ್ದಾರೆ. ಇದೀಗ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿದೆ.
ಗರಡಿ ಟೈಟಲ್ ಟ್ರ್ಯಾಕ್ ರಿಲೀಸ್: ಚಿತ್ರದ ಪ್ರಚಾರದ ಭಾಗವಾಗಿ ಗರಡಿ ಚಿತ್ರದ ಟೈಟಲ್ ಟ್ರ್ಯಾಕ್ ಅನಾವರಣಗೊಂಡಿದೆ. ಯೋಗರಾಜ್ ಭಟ್ ಬರೆದಿರುವ 'ಲೋಕಾನೆ ಗರಡಿ..ಬಾಳೇ ಅಖಾಡ' ಎಂಬ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಾಯಕ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ನೀಡುವುದರ ಜೊತೆಗ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿಯೂ ಹಾಡು ಹಾಡಿದ್ದಾರೆ. ಹರಿಕೃಷ್ಣ ಜೊತೆಗೆ ಸಾಕಷ್ಟು ಗಾಯಕರು ಸಹ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಗರಡಿ ಸುತ್ತ ಚಿತ್ರದ ಕಥೆ: ಗರಡಿ ಎಂದರೆ ಒಂದು ಊರು ಕಾಯುವ ಪೊಲೀಸ್ ಠಾಣೆ ಇದ್ದ ಹಾಗೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ''ಹಿಂದೆ ಒಂದು ಊರಿನ ರಕ್ಷಣೆಗೆ ಗರಡಿ ಬಹು ಮುಖ್ಯವಾಗಿತ್ತು. ಊರಿನವರು ಸಹ ಗರಡಿ ಮನೆಯ ಕುಸ್ತಿಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ ಗರಡಿ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್ ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ. ಇದೊಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು. ಹಾಡನ್ನು ಹರಿಕೃಷ್ಣ ಅದ್ಭುತವಾಗಿ ಸಂಯೋಜಿಸಿ, ಹಾಡಿದ್ದಾರೆ. ಎಲ್ಲಾ ವರ್ಗದವರು ನೋಡಬಹುದಾದ ಚಿತ್ರವಿದು'' ಎಂದು ತಿಳಿಸಿದರು.
ವಿಶೇಷ ಪಾತ್ರದಲ್ಲಿ ದರ್ಶನ್:ಬಳಿಕ ನಾಯಕ ನಟ ಸೂರ್ಯ ಮಾತನಾಡಿ, "ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ. ಸಿನಿಮಾದಲ್ಲಿ ಎಲ್ಲರೂ "ಗರಡಿ ಸೂರಿ" ಅಂತ ಕರೆಯುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್ ಅವರು ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಯಾಗಿರುವ ಹಾಡಿನಲ್ಲಿ ನಾನು ಮೈ ಕುಣಿಸಿದ್ದೇನೆ. ಯೋಗರಾಜ್ ಭಟ್ ಸಾಹಿತ್ಯ ಹಾಗೂ ಹರಿಕೃಷ್ಣ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ" ಎಂದರು.