ಟೈಗರ್ ಶ್ರಾಫ್ ಹಾಗೂ ಕೃತಿ ಸನೋನ್ ನಟನೆಯ 'ಗಣಪತ್: ಎ ಹೀರೋ ಈಸ್ ಬಾರ್ನ್' ನಿನ್ನೆ ಚಿತ್ರಮಂದಿಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. 2023ರ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡ ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಇತ್ತ, ಬಾಕ್ಸ್ ಆಫೀಸ್ ಅಂಕಿ ಅಂಶ ಕೂಡ ಸಾಧಾರಣವಾಗಿದೆ.
ವಿಕಾಸ್ ಬಹ್ಲ್ ನಿರ್ದೇಶನದ ಆ್ಯಕ್ಷನ್ ಡ್ರಾಮಾ ಅಕ್ಟೋಬರ್ 20 ರಂದು ತೆರೆಗಪ್ಪಳಿಸಿತು. ಪ್ರೇಕ್ಷಕರು - ವಿಮರ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು. ಟೈಗರ್ ಶ್ರಾಫ್ ಹಾಗೂ ಕೃತಿ ಸನೋನ್ ಜೊತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಸಾಧಾರಣ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿರುವ 'ಗಣಪತ್' ವಾರಾಂತ್ಯ (ಇಂದು, ನಾಳೆ) ಉತ್ತಮ ಸಂಖ್ಯೆ ಹೊಂದುವ ನಿರೀಕ್ಷೆ ಇದೆ.
ಗಣಪತ್ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಗಣಪತ್ ತನ್ನ ಮೊದಲ ದಿನ 2.5 ಕೋಟಿ ರೂ. ಸಂಪಾದನೆ ಮಾಡಿದೆ. ನಟ ಟೈಗರ್ ಶ್ರಾಫ್ ವೃತ್ತಿಜೀವನದಲ್ಲಿ ಇದು ಕಡಿಮೆ ಅಂಕಿ ಅಂಶ ಎಂದು ಹೇಳಲಾಗಿದೆ. ಆರಂಭಿಕ ಅಂದಾಜಿನ ಪ್ರಕಾರ, ಸಿನಿಮಾ ಎರಡನೇ ದಿನ 2.36 ಕೋಟಿ ರೂ. ಗಳಿಸುವ ಸಾಧ್ಯತೆ ಇದೆ. ಆಗ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಗಣಪತ್‌ನ ಒಟ್ಟು (2 ದಿನದ ಗಳಿಕೆ) ಕಲೆಕ್ಷನ್ 4.86 ಕೋಟಿ ರೂಪಾಯಿ ಆಗಲಿದೆ.