ಬಾಲಿವುಡ್ ಬಹುಬೇಡಿಕೆ ನಟರಾದ ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಅಭಿನಯದ 'ಗಣಪತ್: ಎ ಹೀರೋ ಈಸ್ ಬಾರ್ನ್' ಸಿನಿಮಾ ಇಂದು ತೆರೆ ಕಂಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಮೊದಲ ದಿನವೇ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯೋಗ್ಯವಾದ ಆರಂಭ ಪಡೆಯುವ ಸಾಧ್ಯತೆಯಿದೆ.
'ಗಣಪತ್' ಚಿತ್ರವು ಭಾರತದಾದ್ಯಂತ 2250ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. 150 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರವು ಮೊದಲ ದಿನ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. Sacnilk ಪ್ರಕಾರ, 'ಗಣಪತ್: ಎ ಹೀರೋ ಈಸ್ ಬಾರ್ನ್' ಸಿನಿಮಾ ಫಸ್ಟ್ ಡೇ ಸುಮಾರು 4 ಕೋಟಿ ರೂಪಾಯಿಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಪ್ರೇಕ್ಷಕರ ಪ್ರತಿಕ್ರಿಯೆ:'ಗಣಪತ್' ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಚಿತ್ರಮಂದಿರಗಳಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಬೆಳಗ್ಗೆಯಿಂದಲೇ ಶೋ ಪ್ರಾರಂಭವಾಗಿದ್ದು, ಚಿತ್ರ ವೀಕ್ಷಿಸಿದ ಜನರು ಎಕ್ಸ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿನ ಪ್ರತಿಯೊಬ್ಬ ಪಾತ್ರಧಾರಿಯ ಅಭಿನಯವನ್ನು ಶ್ಲಾಘಿಸಿದ್ದಾರೆ.
"ಟೈಗರ್ ಶ್ರಾಫ್ ಆಕ್ಷನ್ ತುಂಬಾ ಚೆನ್ನಾಗಿದೆ. ಕೃತಿ ಸನೋನ್ ಸುಂದರವಾಗಿ ಮತ್ತು ಉತ್ತಮವಾಗಿ ನಟಿಸಿದ್ದಾರೆ. ದ್ವಿತೀಯಾರ್ಧ ಹಾಗೂ ಕ್ಲೈಮ್ಯಾಕ್ಸ್ ತುಂಬಾ ಸ್ಪೀಡ್ ಆಗಿದೆ. ಸಿನಿಮಾ ಒಳ್ಳೆದಿದೆ" ಎಂದು ಎಕ್ಸ್ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಮತ್ತೊಬ್ಬರು, "ಗಣಪತ್ ಅನ್ನು ಒಂದು ಪದದಲ್ಲಿ ಹೇಳುವುದಾದರೆ, ಇದು ಎವರೇಜ್ ಸಿನಿಮಾ. ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಕೆಮಿಸ್ಟ್ರೀ ಚೆನ್ನಾಗಿದೆ. ಅಮಿತಾಭ್ ಬಚ್ಚನ್ ಅವರ ಸ್ಕ್ರೀನ್ ಪ್ರೆಸೆನ್ಸ್ ಗುಡ್. ಅಷ್ಟೊಂದು ರೋಮಾಂಚನಕಾರಿ ಸಿನಿಮಾವೇನಲ್ಲ. ಆದರೆ ಒಂದು ಬಾರಿ ನೋಡಬಹುದು" ಎಂದಿದ್ದಾರೆ.
'ಗಣಪತ್' ಭಾರತೀಯ ಚಿತ್ರರಂಗದಲ್ಲಿ ಹೊಸ ಮಾದರಿ: ಈ ಹಿಂದೆ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಜಾಕಿ ಭಗ್ನಾನಿ ಅವರು ಗಣಪತ್ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಿರಲಿವೆ. ಜಗತ್ತಿನಾದ್ಯಂತ ಇರುವ ನುರಿತ ಗ್ರಾಫಿಕ್ಸ್ ತಜ್ಞರ ಸ್ಪರ್ಶ ಈ ಚಿತ್ರಕ್ಕಿದೆ. ಈವರೆಗೆ ಮೂಡಿ ಬಂದಿರುವ ಯಾವುದೇ ಭಾರತೀಯ ಸಿನಿಮಾದಲ್ಲಿ ನೋಡಿರದ ವಿಎಫ್‍ಎಕ್ಸ್ ಕೆಲಸ ಈ ಚಿತ್ರದಲ್ಲಿ ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ಗಣಪತ್ ಭಾರತೀಯ ಚಿತ್ರರಂಗದಲ್ಲಿ ಹೊಸ ಮಾದರಿ. ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಅನುಭವ ನೀಡುವ ಪ್ರಯತ್ನವನ್ನು ಈ ಚಿತ್ರತಂಡ ಮಾಡಿದೆ ಎಂದಿದ್ದರು.
ಹತ್ತು ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಬಾಲಿವುಡ್‍ನ ಖ್ಯಾತ ನಿರ್ಮಾಣ ಸಂಸ್ಥೆಯಾದ ಪೂಜಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಗಣಪತ್ ಚಿತ್ರ ನಿರ್ಮಾಣಗೊಂಡಿದೆ. ಪೂಜಾ ಎಂಟರ್ ಪ್ರೈಸಸ್ ಅರ್ಪಿಸುತ್ತಿರುವ ಗಣಪತ್: ಎ ಹೀರೋ ಈಸ್ ಬಾರ್ನ್ ಚಿತ್ರವನ್ನು ವಾಶು ಭಗ್ನಾನಿ, ಜಾಕಿ ಭಗ್ನಾನಿ, ದೀಪಶಿಖಾ ದೇಶ್ ಮುಖ್ ಮತ್ತು ವಿಕಾಸ್ ಬಹ್ಲ್ ಜಂಟಿಯಾಗಿ ನಿರ್ಮಿಸಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶಿಸಿರುವ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಇಂದು ಬಿಡುಗಡೆಯಾಗಿದೆ.
ಇದನ್ನೂ ಓದಿ:'ಗಣಪತ್' ಸಿನಿಮಾದ ಜೈ ಗಣೇಶ ಹಾಡು ಬಿಡುಗಡೆ: ಅಕ್ಟೋಬರ್ 20ಕ್ಕೆ ಸಿನಿಮಾ ತೆರೆಗೆ